ಉಪಹಾರ್ ಥಿಯೇಟರ್ ನಲ್ಲಿ ಬೆಂಕಿ ಪ್ರಕರಣ:ಉದ್ಯಮಿಗಳಾದ ಸುಶೀಲ್,ಗೋಪಾಲ್ ಅನ್ಸಾಲ್ ಗೆ 7 ವರ್ಷ ಜೈಲು ಶಿಕ್ಷೆ

Update: 2021-11-08 15:44 GMT

ಹೊಸದಿಲ್ಲಿ,ನ.8: ದಿಲ್ಲಿಯ ಉಪಹಾರ್ ಚಿತ್ರಮಂದಿರದಲ್ಲಿ 1997ರಲ್ಲಿ ಸಂಭವಿಸಿದ್ದ ಅಗ್ನಿ ಅವಘಡಕ್ಕೆ ಸಂಬಂಧಿಸಿದ ಸಾಕ್ಷಾಧಾರಗಳನ್ನು ತಿರುಚಿದ್ದಕ್ಕಾಗಿ ಬಿಲ್ಡರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ ಅನ್ಸಾಲ್ ಸೋದರರಿಗೆ ಇಲ್ಲಿಯ ಪಟಿಯಾಳಾ ಹೌಸ್ ನ್ಯಾಯಾಲಯವು ಸೋಮವಾರ ಏಳು ವರ್ಷಗಳ ಜೈಲುಶಿಕ್ಷೆ ಮತ್ತು ತಲಾ 2.25 ಕೋ.ರೂ.ದಂಡವನ್ನು ವಿಧಿಸಿದೆ. ಈ ದುರಂತದಲ್ಲಿ 59 ಜನರು ಸಾವನ್ನಪ್ಪಿದ್ದರು.

ಪ್ರಕರಣದಲ್ಲಿ ಸಾಕ್ಷಾಧಾರಗಳನ್ನು ತಿರುಚಿದ್ದಕ್ಕಾಗಿ ಇಬ್ಬರನ್ನೂ ದೋಷಿಗಳೆಂದು ಕಳೆದ ತಿಂಗಳು ಘೋಷಿಸಿದ್ದ ನ್ಯಾಯಾಲಯವು ಸೋಮವಾರ ಶಿಕ್ಷೆಯನ್ನು ಪ್ರಕಟಿಸಿತು. ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ಅನ್ಸಾಲ್ ಸೋದರರಿಗೆ ಎರಡು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು. ಬಳಿಕ ಅವರನ್ನು ಬಿಡುಗಡೆಗೊಳಿಸಿ ತಲಾ 30 ಕೋ.ರೂ.ಗಳ ದಂಡವನ್ನು ವಿಧಿಸಿತ್ತು. ದಂಡದ ಹಣದಿಂದ ದಿಲ್ಲಿಯಲ್ಲಿ ಟ್ರಾಮಾ ಕೇರ್ ಸೆಂಟರ್ ನಿರ್ಮಿಸುವಂತೆ ಅದು ಸೂಚಿಸಿತ್ತು.

ಪ್ರಕರಣದ ಇತರ ಇಬ್ಬರು ಆರೋಪಿಗಳಾಗಿದ್ದ ಹರಸ್ವರೂಪ ಪನ್ವಾರ್ ಮತ್ತು ಧರ್ಮವೀರ ಮಲ್ಹೋತ್ರಾ ಅವರು ವಿಚಾರಣೆಯ ಅವಧಿಯಲ್ಲಿ ನಿಧನರಾಗಿದ್ದರು.

ಉಪಹಾರ್ ಚಿತ್ರಮಂದಿರದಲ್ಲಿ ‘ಬಾರ್ಡ್‌ರ್ ’ಹಿಂದಿ ಚಲನಚಿತ್ರ ಪ್ರದರ್ಶಿತವಾಗುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿತ್ತು. ಚಿತ್ರಮಂದಿರದಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿರಲಿಲ್ಲ,ಪರಿಣಾಮವಾಗಿ 59 ಜನರು ಉಸಿರುಗಟ್ಟಿ ಮೃತರಾಗಿದ್ದರು ಮತ್ತು ನೂಕುನುಗ್ಗಲಿನಲ್ಲಿ 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News