ಸಾಲ ಬಾಕಿ ಪ್ರಕರಣ:ಅಸ್ಸಾಂನ ಮಾಜಿ ಮುಖ್ಯಮಂತ್ರಿ ಪುತ್ರನಿಗೆ ಜಾಮೀನು ನೀಡಿದ ವಿಶೇಷ ಸಿಬಿಐ ನ್ಯಾಯಾಲಯ
ಗುವಾಹಟಿ: 25 ವರ್ಷ ಹಳೆಯ ಸಾಲ ಮರುಪಾವತಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿಸಲ್ಪಟ್ಟ ಒಂದು ದಿನದ ನಂತರ ಅಸ್ಸಾಂನ ಮಾಜಿ ಮುಖ್ಯಮಂತ್ರಿ ಹಿತೇಶ್ವರ್ ಸೈಕಿಯಾ ಅವರ ಪುತ್ರ ಅಶೋಕ್ ಸೈಕಿಯಾ ಅವರಿಗೆ ಗುವಾಹಟಿಯ ವಿಶೇಷ ಸಿಬಿಐ ನ್ಯಾಯಾಲಯವು ಜಾಮೀನು ನೀಡಿದೆ.
"ಜಾಮೀನು ಮಂಜೂರಾಗಿದೆ ಮತ್ತು ಅವರು ಸ್ವಲ್ಪ ಸಮಯದ ನಂತರ ಹೊರಬರುತ್ತಾರೆ ಎಂದು ಅಶೋಕ್ ಅವರ ವಕೀಲರು ನನಗೆ ತಿಳಿಸಿದ್ದಾರೆ ... ನಾವು ಶೀಘ್ರದಲ್ಲೇ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತೇವೆ" ಎಂದು ಅವರ ಹಿರಿಯ ಸಹೋದರ ಮತ್ತು ಅಸ್ಸಾಂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ indianexpress.com ಗೆ ತಿಳಿಸಿದರು.
1996ರಲ್ಲಿ ಅಸ್ಸಾಂ ರಾಜ್ಯ ಸಹಕಾರ ಹಾಗೂ ಕೃಷಿ ಅಭಿವೃದ್ಧಿ (ASCARD) ಬ್ಯಾಂಕ್‌ನಿಂದ 9.37 ಲಕ್ಷ ರೂ.ಗಳ ಸಾಲವನ್ನು ಮರುಪಾವತಿಸದ ಆರೋಪದ ಮೇಲೆ ಐವತ್ತರ ಹರೆಯದ ಉದ್ಯಮಿ ಅಶೋಕ್ ಸೈಕಿಯಾ ಅವರನ್ನು ಸಿಬಿಐ ರವಿವಾರ ಸಂಜೆ ಅವರ ನಿವಾಸದಿಂದ ಬಂಧಿಸಿತ್ತು. 1998ರಲ್ಲಿ ಬ್ಯಾಂಕ್ ನೌಕರರು ಈ ಸಂಬಂಧ ಪ್ರಕರಣ ದಾಖಲಿಸಿದ್ದರು.
ಆದಾಗ್ಯೂ, ಅಶೋಕ್ ಸೈಕಿಯಾ ರವಿವಾರ ನೀಡಿರುವ ಹೇಳಿಕೆಯಲ್ಲಿ, "ರಾಜಿ ಪರಿಹಾರ ಯೋಜನೆ" ಮೂಲಕ ಸಾಲವನ್ನು ಮರುಪಾವತಿಸಲಾಗಿದೆ ಹಾಗೂ ಅದಕ್ಕೆ ನನ್ನ ಬಳಿ ಸಾಕ್ಷ್ಯವಿದೆ ಎಂದು ಹೇಳಿದ್ದಾರೆ.
"ನಾನು 2011 ರಲ್ಲಿ ಸಾಲವನ್ನು ಮರುಪಾವತಿಸಿದ್ದೇನೆ ಹಾಗೂ ಪುರಾವೆಯಾಗಿ ಬ್ಯಾಂಕ್ ಅಕ್ಟೋಬರ್ 2015 ರಲ್ಲಿ ಎಲ್ಲಾ ಬಾಕಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಮಾಣಪತ್ರವನ್ನು ನೀಡಿದೆ" ಎಂದು ಅಶೋಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.