ಮಂಗಳೂರಿನ ರೈಲು ನಿಲ್ದಾಣಗಳನ್ನು'ನೈರುತ್ಯ ರೈಲ್ವೆ'ಗೆ ಸೇರಿಸಿ

Update: 2021-11-08 18:12 GMT

ಮಾನ್ಯರೇ,

ಕಳೆದ ಮೂವತ್ತು ವರ್ಷಗಳಿಂದ ಕನ್ನಡಿಗರು ಮಂಗಳೂರು ಜಂಕ್ಷನ್ ಹಾಗೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಗಳನ್ನು 'ನೈರುತ್ಯ ರೈಲ್ವೆ'ಗೆ ಸೇರಿಸಲು ಮನವಿ ಮಾಡುತ್ತ ಬಂದಿದ್ದಾರೆ. ಇ. ಶ್ರೀಧರನ್ ಅವರು ನೇತ್ರಾವತಿ ಸೇತುವೆಯಿಂದ ರೋಹಾ ತನಕದ ರೈಲು ಹಳಿ ಕೆಲಸದ ಮುಖ್ಯಸ್ಥರಾಗಿದ್ದರು. ಆಗ ಅವರು ಮಂಗಳೂರು ಜಂಕ್ಷನ್ ಹಾಗೂ ಸೆಂಟ್ರಲ್ ರೈಲು ನಿಲ್ದಾಣಗಳಲ್ಲಿ ಕೆಲಸ ಮಾಡುವವರಿಗೆ ತಿಂಗಳಿಗೆ ಕೋಟಿಗಟ್ಟಲೆ ರೂ. ಸಂಬಳ ನೀಡಬೇಕಾಗಿದೆ. ಆದ್ದರಿಂದ ಈ ಎರಡು ರೈಲು ನಿಲ್ದಾಣಗಳನ್ನು ಹೊರಗಿಟ್ಟು ತೋಕೂರಿನಿಂದ ರೋಹಾ ತನಕ ಹಳಿ ಹಾಸಿದ ಹಣ ವಾಪಸ್ ಬಂದರೆ ಸಾಕೆಂದು ಶಿಫಾರಸು ಮಾಡಿದರು. ದಿನಾಂಕ 27.1.2004ರಲ್ಲಿ ರೈಲ್ವೆ ಬೋರ್ಡ್ ಡೈರೆಕ್ಟರ್ ವಿ. ಕೆ. ದುಗ್ಗಲ್ ಅವರು ಮಂಗಳೂರು ಜಂಕ್ಷನ್ ಹಾಗೂ ಸೆಂಟ್ರಲ್ ಇವು ನೈರುತ್ಯ ವಲಯ ರೈಲ್ವೆ ವಲಯಕ್ಕೆ ಸೇರಿಸುವ ಆದೇಶ ಲಿಖಿತವಾಗಿ ನೀಡಿದ್ದಾರೆ. ಅಂದಿನ ರೈಲ್ವೆ ಮಂತ್ರಿ ಮೊದಲೇ (28.12.2003ರಂದು) ಈ ವಿಷಯವನ್ನು ಮಂಗಳೂರಿನಲ್ಲಿ ಪ್ರಕಟಿಸಿದ್ದರು. ಆ ನಂತರ ದಿನಾಂಕ 27.12.2004ರಲ್ಲಿ ರೈಲ್ವೆ ಬೋರ್ಡ್ ದಕ್ಷತೆ ಮತ್ತು ಸಂಶೋಧನೆ (ಸಂಚಾರ) ಇದರ ನಿರ್ದೇಶಕ ಸಂಜಯ್ ಮಿಶ್ರಾ ಅವರು ಕೊಂಕಣ ರೈಲ್ವೆಯ ತೋಕೂರು ನಿಲ್ದಾಣವನ್ನು ನೈರುತ್ಯ ರೈಲ್ವೆಗೆ ಸೇರ್ಪಡೆಗೊಳಿಸುವಂತೆ ಆದೇಶ ಪತ್ರ ಬರೆದರು. ಅದರಂತೆ 27.1.2004ರಿಂದ ಇಂದಿನವರೆಗೆ ರೈಲ್ವೆ ಬೋರ್ಡ್ 9 ಲಿಖಿತ ಆದೇಶಗಳನ್ನು ನೀಡಿದರೂ, ಇವೆರಡೂ ನಿಲ್ದಾಣಗಳು ಸದರ್ನ್ ರೈಲ್ವೆ ವ್ಯಾಪ್ತಿಯಲ್ಲೇ ಇವೆ. ಈ ಎಲ್ಲಾ ಲಿಖಿತ ಆದೇಶಗಳಿಗೆ ಬೆಲೆ ಇಲ್ಲವೇ?
ಇತ್ತೀಚೆಗೆ ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಅವರು 12ಪುಟಗಳ ತಮ್ಮ ಪತ್ರದಲ್ಲಿ (10.2.2020) ಮಂಗಳೂರು ಜಂಕ್ಷನ್ ಹಾಗೂ ಸೆಂಟ್ರಲ್ ಮತ್ತು ತೋಕೂರು ರೈಲು ನಿಲ್ದಾಣಗಳು ಯಾಕಾಗಿ ನೈರುತ್ಯ ರೈಲ್ವೆಗೆ ಸೇರಬೇಕೆಂದು ಸುದೀರ್ಘ ವಿವರಣೆ ನೀಡಿ ದಿಲ್ಲಿ ರೈಲ್ವೆ ಬೋರ್ಡ್ ಚೇರ್ಮನ್‌ಗೆ ಪತ್ರ ಬರೆದಿದ್ದಾರೆ. ಅವರು ಪತ್ರದಲ್ಲಿ ನೀಡಿದ ಕಾರಣಗಳಲ್ಲಿ ಪ್ರಮುಖವಾದುವು ಹೀಗಿವೆ:

1. ಈ ವಿಭಾಗ ಮತ್ತು ಅದರ ಕಾರ್ಯಾಚರಣೆಗಳ ಸರಿಯಾದ ನಿರ್ವಹಣೆ ಮತ್ತು ತಡೆರಹಿತ ಏಕೀಕರಣಕ್ಕಾಗಿ ತೋಕೂರು ಜೊತೆಗೆ ಇಡೀ ಮಂಗಳೂರು ಸಂಕೀರ್ಣವು ಒಂದು ನಿರ್ವಹಣೆ ಅಡಿಯಲ್ಲಿ ಬರುವುದು ಸಂಪೂರ್ಣವಾಗಿ ಅವಶ್ಯಕವಾಗಿದೆ.
2. ನಾನು ಈ ರೈಲ್ವೆಗೆ ಸೇರಿದ ನಂತರ ಕರ್ನಾಟಕ ಕರಾವಳಿಯ ಜನರಿಂದ ಹೊಸ ರೈಲುಗಳನ್ನು ಆರಂಭಿಸಲು ಮತ್ತು ಪಡೀಲ್ ಬೈಪಾಸ್ ಮೂಲಕ ಕಾರವಾರಕ್ಕೆ ನೇರವಾಗಿ ರೈಲುಗಳನ್ನು ಆರಂಭಿಸಲು ಸಾವಿರಾರು ವಿನಂತಿಗಳು ಬರುತ್ತಿವೆ.
3. ನಾವು ಕೊಂಕಣ ಹಾಗೂ ಸದರ್ನ್ ರೈಲ್ವೆಗೆ ಮನವರಿಕೆ ಮಾಡಿದರೂ ಅವರು ಸಹಕರಿಸುತ್ತಿಲ್ಲ.
4. ಎಲ್ಲ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಲು ಮಂಗಳೂರು ಸಂಕೀರ್ಣದ ಜೊತೆಗೆ ತೋಕೂರು ಇವನ್ನು ನೈರುತ್ಯ ರೈಲ್ವೆಗೆ ಸಂಯೋಜಿಸುವುದೇ ಉಳಿದಿರುವ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಅಧಿಸೂಚನೆ ಹೊರಡಿಸಬೇಕು.
ಆದುದರಿಂದ 2003ರಿಂದ ಈ ವಲಯ ಸೇರ್ಪಡೆ ರೈಲ್ವೆ ಬೋರ್ಡ್ ಆದೇಶ ನೀಡಿದರೂ ಆಗಿಲ್ಲ ಎಂದಾದರೆ ಇದಕ್ಕೆ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ; ವಿಷಯದ ಗಂಭೀರತೆಯನ್ನು ಅರಿಯುವಲ್ಲಿ ವಿಫಲತೆ ಎನ್ನಬಹುದು.
 

Writer - -ಅಮೃತ್ ಪ್ರಭು, ವಿರಾರ್

contributor

Editor - -ಅಮೃತ್ ಪ್ರಭು, ವಿರಾರ್

contributor

Similar News