ತಮಿಳುನಾಡಿನಲ್ಲಿ ಮುಂದುವರಿದ ಭಾರಿ ಮಳೆ: ನಾಲ್ಕು ಮಂದಿ ಮೃತ್ಯು

Update: 2021-11-09 04:17 GMT

ಚೆನ್ನೈ: ತಮಿಳುನಾಡಿನಲ್ಲಿ ಸೋಮವಾರ ಕೂಡಾ ನಿರಂತರ ಮಳೆ ಮುಂದುವರಿದಿದ್ದು, ಮಳೆ ಸಂಬಂಧಿ ದುರಂತಗಳಿಂದ ನಾಲ್ವರು ಮೃತಪಟ್ಟಿದ್ದಾರೆ.

ಚೆನ್ನೈ ನಗರ ಸ್ವಲ್ಪ ಮಟ್ಟಿಗೆ ನಿರಾಳವಾಗಿದ್ದರೂ, ಹಲವು ರಸ್ತೆ ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನಗರದಲ್ಲಿ ಮಂಗಳವಾರದಿಂದ ಮತ್ತೆ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೇರಳ, ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಮತ್ತು ತಮಿಳುನಾಡಿನಲ್ಲಿ ಮುಂದಿನ ಐದು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏತನ್ಮಧ್ಯೆ ಚೆನ್ನೈ ಮತ್ತು ಉಪನಗರಗಳಲ್ಲಿ ಸುರಂಗ ಮಾರ್ಗಗಳು ಮುಚ್ಚಲ್ಪಟ್ಟಿವೆ. ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗಿದ್ದು, ಪೌರಕಾರ್ಮಿಕರು ಚರಂಡಿಗಳ ಹೂಳೆತ್ತುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹವಾಮಾನ ಇಲಾಖೆ ನೀಲಗಿರೀಸ್, ಕೊಯಮತ್ತೂರು, ದಿಂಡುಗಲ್, ಥೇಣಿ, ತೇನ್‌ಕಾಸಿ ಮತ್ತು ತಿರುನಲ್ವೇಲಿ ಸೇರಿದಂತೆ 14 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಚಂಡಮಾರುತ ಬಂಗಾಳಕೊಲ್ಲಿ ಮತ್ತು ಪಕ್ಕದ ದಕ್ಷಿಣ ಅಂಡಮಾನ್ ಸಮುದ್ರದ ಆಗ್ನೇಯ ದಿಕ್ಕಿನಲ್ಲಿ ಪ್ರಸರಣಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಇದರ ಪರಿಣಾಮವಾಗಿ ಬಂಗಾಳಕೊಲ್ಲಿಯ ಆಗ್ನೇಯದಲ್ಲಿ ವಾಯುಭಾರ ಕುಸಿತದ ಸಾಧ್ಯತೆ ಇದೆ ಎಂದು ಹೇಳಿದೆ.

ಸತತ ಎರಡನೇ ದಿನ ಕೂಡ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮಳೆ ಪೀಡಿತ ಪ್ರದೇಶಗಳನ್ನು ವೀಕ್ಷಿಸಿ, ಪ್ರವಾಹ ಪರಿಹಾರಗಳನ್ನು ವಿತರಿಸಿದರು. ನವೆಂಬರ್ 12ರ ವರೆಗೆ ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News