ಯಾವುದೇ ಚರ್ಚೆ ಇಲ್ಲದೇ 19 ಕಾನೂನುಗಳಿಗೆ ಮಧ್ಯಪ್ರದೇಶ ವಿಧಾನಸಭೆ ಅಸ್ತು !

Update: 2021-11-09 05:26 GMT

ಭೋಪಾಲ್: ಮಧ್ಯಪ್ರದೇಶ ವಿಧಾನಸಭೆಯ ನಾಲ್ಕು ದಿನಗಳ ಮುಂಗಾರು ಅಧಿವೇಶನವನ್ನು ಈ ಬಾರಿ ಎರಡು ದಿನಕ್ಕೆ ಮೊಟಕುಗೊಳಿಸಲಾಗಿದ್ದು, ಕೇವಲ ಎರಡು ಗಂಟೆಗಳ ಕಲಾಪ ನಡೆದಿದೆ. ಈ ಅವಧಿಯಲ್ಲಿ ಆರು ಮಸೂದೆಗಳು ಮತ್ತು ಪೂರಕ ಬಜೆಟ್ ಆಂಗೀಕರಿಸಲಾಗಿದೆ. ಕಾನೂನು ರೂಪಿಸುವ ಅಥವಾ ಕಾನೂನಿಗೆ ತಿದ್ದುಪಡಿ ತರುವ 28 ಪ್ರಸ್ತಾವನೆಗಳನ್ನು ಸದನದ ಮುಂದಿಡಲಾಗಿದ್ದು, 19 ಪ್ರಸ್ತಾವನೆಗಳು ಯಾವುದೇ ಚರ್ಚೆ ಇಲ್ಲದೇ ಆಂಗೀಕಾರವಾಗಿವೆ.

ವಿರೋಧ ಪಕ್ಷಗಳ ಭಾರಿ ಪ್ರತಿಭಟನೆ ಹಾಗೂ ಗದ್ದಲದ ನಡುವೆ ಆಂಗೀಕಾರವಾದ ಒಂದು ಕಾನೂನು, ಮಧ್ಯಪ್ರದೇಶ ಎಕ್ಸೈಸ್ (ತಿದ್ದುಪಡಿ) ಮಸೂದೆ-2021. ವಿಷಪೂರಿತ ಮದ್ಯ ಸೇವಿಸಿ ಜನ ಸಾವಿಗೀಡಾದಲ್ಲಿ ತಪ್ಪಿತಸ್ಥರಿಗೆ ಮರಣ ದಂಡನೆ ವಿಧಿಸಲು ಇದು ಅವಕಾಶ ಮಾಡಿಕೊಡುತ್ತದೆ. ಮಂಡೇಸರ್‌ನಲ್ಲಿ ವಿಷಪೂರಿತ ಮದ್ಯ ಸೇವಿಸಿ ಏಳು ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಸರ್ಕಾರ ಈ ತಿದ್ದುಪಡಿ ಪ್ರಸ್ತಾವಿಸಿತ್ತು. ಕಾಂಗ್ರೆಸ್ ಶಾಸಕರ ಘೋಷಣೆಗಳ ನಡುವೆಯೇ ಮಸೂದೆ ಆಂಗೀಕಾರವಾಗಿದೆ ಎಂದು ಸ್ಪೀಕರ್ ಗಿರೀಶ್ ಗೌತಮ್ ಘೋಷಿಸಿದರು.

ಮಧ್ಯಪ್ರದೇಶ ಲೇವಾದೇವಿ (ತಿದ್ದುಪಡಿ) ಮಸೂದೆಯನ್ನು ಕೇವಲ ಆರು ನಿಮಿಷಗಳಲ್ಲಿ ಆಂಗೀಕರಿಸಲಾಗಿದ್ದು, ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಮಸೂದೆ ಕೇವಲ 1.14 ನಿಮಿಷಗಳಲ್ಲಿ ಒಪ್ಪಿಗೆ ಪಡೆಯಿತು.

ಕಳೆದ ವರ್ಷ ಕೋವಿಡ್-19 ಕಟ್ಟುನಿಟ್ಟಿನ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಒಂದು ದಿನದ ವಿಶೇಷ ಮುಂಗಾರು ಅಧಿವೇಶನ ಕೇವಲ 90 ನಿಮಿಷಗಳಲ್ಲಿ ಮುಕ್ತಾಯವಾಗಿತ್ತು. ಇದು ಈ ವರ್ಷ ಮಧ್ಯಪ್ರದೇಶ ವಿಧಾನಸಭೆಯ ಕಲಾಪ ನಡೆದ ಅತ್ಯಂತ ಕಿರು ಅವಧಿಯಾಗಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಸ್ಪೀಕರ್ ಗಿರೀಶ್ ಗೌತಮ್ ಕಳವಳ ವ್ಯಕ್ತಪಡಿಸಿದ್ದಾರೆ.

ಒಂದು ಕಾನೂನು, ಅದರಲ್ಲೂ ಮುಖ್ಯವಾಗಿ ದಂಡನಾತ್ಮಕ ಕಾನೂನು ಚರ್ಚೆಯಿಲ್ಲದೇ ಅಂಗೀಕಾರವಾಗುವುದು ಸಮಂಜಸವಲ್ಲ. ಆದರೆ ಕೋಲಾಹಲದಿಂದಾಗಿ ಕಲಾಪಕ್ಕೆ ಪದೇ ಪದೇ ತಡೆ ಉಂಟಾಯಿತು. ಇಂಥ ಸಂದರ್ಭದಲ್ಲಿ ಸರ್ಕಾರ ತನ್ನ ಕೆಲಸವನ್ನು ನಿಭಾಯಿಸಲು ಕಾನೂನು ಆಂಗೀಕರಿಸುವುದು ಅನಿವಾರ್ಯವಾಯಿತು ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಯಾವುದೇ ಚರ್ಚೆ ಇಲ್ಲದೇ ಕಾನೂನು ಆಂಗೀಕರಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಲೋಕಸಭೆ ಮತ್ತು ಸುಪ್ರೀಂಕೋರ್ಟ್ ಕೂಡಾ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News