ನನ್ನ ಮಂತ್ರಿಗಳಿಗೆ ಹಿಂದಿ ಗೊತ್ತಿಲ್ಲ: ಅಮಿತ್ ಶಾಗೆ ಮಿಝೋರಾಂ ಮುಖ್ಯಮಂತ್ರಿ ಪತ್ರ

Update: 2021-11-09 06:30 GMT

ಗುವಾಹಟಿ: ರಾಜ್ಯದ ಸಚಿವರಿಗೆ ಹಿಂದಿ ಅರ್ಥವಾಗುವುದಿಲ್ಲ ಹಾಗೂ ಅವರಲ್ಲಿ ಕೆಲವರಿಗೆ ಇಂಗ್ಲಿಷ್ ಕೂಡ ಬರುವುದಿಲ್ಲ ಎಂದು ಮಿಝೋರಾಂ ಮುಖ್ಯಮಂತ್ರಿ ಪು ಝೋರಂಥಂಗ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ಬರೆದಿದ್ದು, ಕೇಂದ್ರದ ಆದೇಶವನ್ನು ಮಾರ್ಪಡಿಸುವಂತೆ ಹಾಗೂ ಮಿಝೋ ಭಾಷೆಯ ಜ್ಞಾನವಿಲ್ಲದ ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.

ರೇಣು ಶರ್ಮಾ ಅವರ ಬದಲಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆ.ಸಿ. ರಾಮತಂಗ ಅವರನ್ನು ನೂತನ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

"ಗುಜರಾತ್ ಕೇಡರ್‌ನ ನನ್ನ ಮುಖ್ಯ ಕಾರ್ಯದರ್ಶಿ ಲಾಲ್ನುನ್ಮಾವಿಯಾ ಚುವಾಗೊ ಅವರು ನಿವೃತ್ತರಾದ ನಂತರ ನನ್ನ ಈಗಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆ.ಸಿ. ರಾಮತಂಗ (ಮಣಿಪುರ ಕೇಡರ್) ಅವರನ್ನು ಮುಂದಿನ ಮುಖ್ಯ ಕಾರ್ಯದರ್ಶಿಯನ್ನಾಗಿ ಮಾಡಲು ನಾನು ವಿನಂತಿಸಿದ್ದೆ. ಆದರೆ, ಗೃಹ ಸಚಿವಾಲಯವು ರೇಣು ಶರ್ಮಾ ಅವರನ್ನು ಹೊಸ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿದೆ ಎಂದು ಅಕ್ಟೋಬರ್ 29 ರ ಪತ್ರದಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.  ಅದರ ಪ್ರತಿಯು ಎನ್‌ಡಿಟಿವಿಯಲ್ಲಿ ಲಭ್ಯವಿದೆ.

1988 ರ ಬ್ಯಾಚ್‌ನ ಎಜಿಎಂಯುಟಿ ಕೇಡರ್ ಐಎಎಸ್ ಅಧಿಕಾರಿಯಾಗಿರುವ ರೇಣು ಶರ್ಮಾ ಅವರನ್ನು ನವೆಂಬರ್ 1 ರಿಂದ ಮಿಝೋರಾಂನ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲು ಅಕ್ಟೋಬರ್ 28 ರಂದು ಕೇಂದ್ರವು ನೇಮಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News