ಚಂದ್ರನಲ್ಲಿಗೆ ಮಾನವಯಾನವನ್ನು 2025ಕ್ಕೆ ಮುಂದೂಡಿದ ನಾಸಾ

Update: 2021-11-10 15:22 GMT

ವಾಶಿಂಗ್ಟನ್, ನ. 10: ಚಂದ್ರನಲ್ಲಿಗೆ ಗಗನಯಾನಿಗಳನ್ನು ಕಳುಹಿಸುವ ಗಡುವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) 2025ರವರೆಗೆ ಮುಂದೂಡಿದೆ ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಮಂಗಳವಾರ ಹೇಳಿದ್ದಾರೆ. 

ಇದರೊಂದಿಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಗಡುವು ಒಂದು ವರ್ಷ ಮುಂದೆ ಹೋದಂತಾಗಿದೆ.

2024ರ ವೇಳೆಗೆ ಚಂದ್ರ ಗ್ರಹಕ್ಕೆ ಮತ್ತೆ ಮಾನವರನ್ನು ಕಳುಹಿಸುವ ಗುರಿಯನ್ನು ಟ್ರಂಪ್ ಆಡಳಿತ ವಿಧಿಸಿತ್ತು.
ಗಗನಯಾನಿಗಳನ್ನು ಚಂದ್ರನಲ್ಲಿಗೆ ಒಯ್ಯುವ ಆರ್ಟೆಮಿಸ್ ಚಂದ್ರ ಸ್ಪರ್ಶ ವಾಹನವನ್ನು ನಿರ್ಮಿಸುವ ಗುತ್ತಿಗೆಯನ್ನು ಸ್ಪೇಸ್ಎಕ್ಸ್ ಕಂಪೆನಿಗೆ ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿದ ಕಾನೂನು ವಿವಾದದಿಂದಾಗಿ ಈ ವಿಳಂಬ ಸಂಭವಿಸಿದೆ ಎಂದು ನೆಲ್ಸನ್ ತಿಳಿಸಿದರು.
ಈ ಕಾನೂನು ವಿವಾದವೇ ಚಂದ್ರನಲ್ಲಿಗೆ ಮಾನವಯಾನ ವಿಳಂಬವಾಗಲು ಪ್ರಮುಖ ಕಾರಣ ಎಂದರು.

‘‘ನಾವು ಕಾನೂನು ವಿವಾದದಲ್ಲಿಯೇ ಏಳು ತಿಂಗಳುಗಳನ್ನು ಕಳೆದೆವು. ಹಾಗಾಗಿ, ಭೂಮಿಯ ಉಪಗ್ರಹ ಚಂದ್ರನಲ್ಲಿ ಮಾನವರು ಇಳಿಯುವ ಗಡುವು 2025ಕ್ಕೆ ಮುಂದೆ ಹೋಗಿದೆ’’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೆಲ್ಸನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News