×
Ad

ಕಾಸ್ ಗಂಜ್ ಕಸ್ಟಡಿ ಸಾವು ಪ್ರಕರಣ: 'ಆತ್ಮಹತ್ಯೆ' ಆರೋಪ ನಿರಾಕರಿಸಿ ಪೊಲೀಸರನ್ನು ದೂರುತ್ತಿರುವ ಮೃತನ ಕುಟುಂಬ

Update: 2021-11-12 18:50 IST
ಸಾಂದರ್ಭಿಕ ಚಿತ್ರ

ಆಲಿಘರ್: ಉತ್ತರ ಪ್ರದೇಶದ ಕಾಸ್ ಗಂಜ್ ಜಿಲ್ಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ 22 ವರ್ಷದ ಯುವಕನ ಕುಟುಂಬ, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಪೊಲೀಸರ ವಾದವನ್ನು ತಿರಸ್ಕರಿಸಿದೆ. 

ಪ್ರಕರಣದ ಸೂಕ್ತ ತನಿಖೆ ನಡೆದು ನ್ಯಾಯ ದೊರಕಬೇಕು, ಯುವಕನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಕುಟುಂಬ ಆಗ್ರಹಿಸಿದೆ.

ಮೃತ ಯುವಕನ ತಂದೆಯ ಹೆಬ್ಬೆಟ್ಟು ಇರುವ ಪತ್ರವನ್ನು ಪೊಲೀಸರು ತೋರಿಸುತ್ತಿದ್ದಾರೆ, ಆದರೆ ಈ ಪತ್ರದಲ್ಲಿ ಪೊಲೀಸರ ಮೇಲೆ ಯಾವುದೇ ಸಂಶಯ ವ್ಯಕ್ತಪಡಿಸಿಲ್ಲವಾದರೂ ಈ ಪತ್ರಕ್ಕೆ ಸಹಿಯನ್ನು ಬಲವಂತದಿಂದ ಪಡೆದುಕೊಳ್ಳಲಾಗಿದೆ ಎಂದು ಯುವಕನ ಕುಟುಂಬ ಆರೋಪಿಸಿದೆ.

‘‘ನನ್ನ ತಮ್ಮ ಅನಕ್ಷರಸ್ಥನಾಗಿದ್ದು, ಕುಟುಂಬ ಆಘಾತದಲ್ಲಿರುವಂತಹ ಸಂದರ್ಭದಲ್ಲಿ ಕಾಗದದ ಹಾಳೆಯೊಂದಕ್ಕೆ ಹಾಕಲಾಗಿರುವ ಹೆಬ್ಬೆಟ್ಟಿನ ಆಧಾರದಲ್ಲಿಯೇ ಪೊಲೀಸರು ನಿರ್ದೋಷಿಗಳು ಎಂದು ಹೇಳಲು ಸಾಧ್ಯವಿಲ್ಲ,’’ ಎಂದು ಮೃತ ಯುವಕನ ತಂದೆಯ ಸೋದರ ಅಬ್ರಾರ್ ಹೇಳಿದ್ದಾರೆ.

‘‘ಪೊಲೀಸರು ಮೃತ ಯುವಕನ ಕುಟುಂಬದ ಒಬ್ಬ ಸದಸ್ಯರಿಗೆ ರೂ 5 ಲಕ್ಷ ನೀಡಿದ್ದಾರೆ ಆದರೆ ಈ ಹಣ ಯಾರ ಕೈಗೆ ನೀಡಿದ್ದಾರೆಂದು ತಿಳಿದಿಲ್ಲ, ಅಲ್ತಾಫ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಪೊಲೀಸರ ಹೇಳಿಕೆ ಸುಳ್ಳು,’’ ಎಂದು ಆತ ಹೇಳಿದ್ದಾರೆ.

ಅಲಹಾಬಾದ್ ಹೈಕೋರ್ಟಿನ ಹಾಲಿ ನ್ಯಾಯಾಧೀಶರೊಬ್ಬರಿಂದ ಪ್ರಕರಣ ತನಿಖೆಯಾಗಬೇಕೆಂದು ಕೋರಿ ಆಲಿಘರ್ ಮುಸ್ಲಿಂ ವಿವಿಯ ವಿದ್ಯಾರ್ಥಿಗಳು ಗುರುವಾರ ಕ್ಯಾಂಪಸ್ಸಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News