×
Ad

ಭಾರತದ ಭೂಪ್ರದೇಶದಲ್ಲಿ ಚೀನಾ ಗ್ರಾಮವನ್ನು ನಿರ್ಮಿಸಿರುವ ವರದಿಗಳು ನಿಜವಲ್ಲ:ಜ.ರಾವತ್

Update: 2021-11-12 21:26 IST

ಹೊಸದಿಲ್ಲಿ,ನ.12: ಚೀನಾ ಭಾರತೀಯ ಭೂಪ್ರದೇಶದಲ್ಲಿ ಗ್ರಾಮವೊಂದನ್ನು ನಿರ್ಮಿಸಿದೆ ಎಂಬ ವರದಿಗಳನ್ನು ಸೇನಾ ಸಿಬ್ಬಂದಿಗಳ ಮುಖ್ಯಸ್ಥ (ಸಿಡಿಎಸ್) ಜ.ಬಿಪಿನ್ ರಾವತ್ ಅವರು ನಿರಾಕರಿಸಿದ್ದಾರೆ.

ಆದಾಗ್ಯೂ ಚೀನಾ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಯಲ್ಲಿ ನಿರ್ಮಾಣ ಕಾಮಗಾರಿಯನ್ನು ನಡೆಸಿದೆ ಎಂದು ಒಪ್ಪಿಕೊಂಡ ಅವರು,ಆದರೆ ಅದು ಚೀನಾದ ಭೂಪ್ರದೇಶದಲ್ಲಿದೆ ಎಂದು ಹೇಳಿದರು.

 ಟೈಮ್ಸ್ ನೌ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದ ಅವರು,‘ಚೀನಾ ವಿಶೇಷವಾಗಿ ಇತ್ತೀಚಿನ ನಮ್ಮ ಮುಖಾಮುಖಿಯ ಬಳಿಕ ಬಹುಶಃ ಭವಿಷ್ಯದಲ್ಲಿ ಎಲ್ಎಸಿಯಲ್ಲಿ ತನ್ನ ನಾಗರಿಕರನ್ನು ಅಥವಾ ತನ್ನ ಸೇನೆಯನ್ನು ನೆಲೆಗೊಳಿಸಲು ಎಲ್ಎಸಿಯಲ್ಲಿ ಗ್ರಾಮಗಳನ್ನು ನಿರ್ಮಿಸುತ್ತಿದೆ. ಆದರೆ ಚೀನೀಯರು ನಮ್ಮ ಭೂಪ್ರದೇಶವನ್ನು ಅತಿಕ್ರಮಿಸಿ ಹೊಸ ಗ್ರಾಮವೊಂದನ್ನು ನಿರ್ಮಿಸಿದ್ದಾರೆ ಎಂಬ ಹಾಲಿ ವಿವಾದ ನಿಜವಲ್ಲ ’ ಎಂದು ತಿಳಿಸಿದರು.

ಚೀನಾ ಅರುಣಾಚಲ ಪ್ರದೇಶದಲ್ಲಿ ಸುಮಾರು 101 ಮನೆಗಳಿರುವ ಹೊಸ ಗ್ರಾಮವೊಂದನ್ನು ನಿರ್ಮಿಸಿದೆ ಎಂದು ಮಾಧ್ಯಮಗಳು ಜನವರಿಯಲ್ಲಿ ವರದಿ ಮಾಡಿದ್ದವು. ನವಂಬರ್ನಲ್ಲಿ ಅಮೆರಿಕದ ರಕ್ಷಣಾ ಇಲಾಖೆಯು ಬಿಡುಗಡೆಗೊಳಿಸಿದ್ದ ವರದಿಯೂ ಈ ಹೊಸಗ್ರಾಮವನ್ನು ಉಲ್ಲೇಖಿಸಿತ್ತು.

ಚೀನಿ ಸೈನಿಕರು ಪ್ರತ್ಯೇಕಗೊಂಡಿದ್ದಾರೆ,ಅವರು ಮುಖ್ಯಭೂಮಿಯಿಂದ ಸಾವಿರಾರು ಮೈಲುಗಳ ದೂರದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಹೇಳಿದ ರಾವತ್,‘ನಮ್ಮ ಯೋಧರು ವರ್ಷಕ್ಕೆ ಎರಡು ಅಥವಾ ಮೂರು ಸಲ ತಮ್ಮ ಮನೆಗಳಿಗೆ ತೆರಳುತ್ತಾರೆ. ಚೀನಿ ಸೈನಿಕರಿಗೆ ಆ ಸೌಲಭ್ಯವಿಲ್ಲ. ಹೀಗಾಗಿ ಚೀನಿಯರು ಎಲ್ಎಸಿಯ ತಮ್ಮ ಭೂಪ್ರದೇಶದಲ್ಲಿ ಇಂತಹ ಗ್ರಾಮಗಳನ್ನು ನಿರ್ಮಿಸುತ್ತಿದ್ದಾರೆ. ನಾವು ಪರಿಗಣಿಸಿರುವ ಎಲ್ಎಸಿಯನ್ನು ಅವರು ಎಲ್ಲಿಯೂ ಅತಿಕ್ರಮಿಸಿಲ್ಲ ’ಎಂದರು.
ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು,ಚೀನಾ ದಶಕಗಳಿಂದಲೂ ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಗುರುವಾರ ಹೇಳಿತ್ತು.

‘ಚೀನಾ ನಮ್ಮ ಭೂಪ್ರದೇಶವನ್ನು ಅತಿಕ್ರಮಿಸಿರುವುದನ್ನಾಗಲೀ ಅಥವಾ ಅದರ ಅಸಮರ್ಥನೀಯ ಹೇಳಿಕೆಗಳನ್ನಾಗಲೀ ಭಾರತವು ಎಂದೂ ಒಪ್ಪಿಕೊಂಡಿಲ್ಲ ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರವಿಂದ ಬಾಗ್ಚಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಭಾರತದ ಪೂರ್ವ ಭಾಗದಲ್ಲಿ ಚೀನಾ ನಿರ್ಮಾಣ ಚಟುವಟಿಕೆಗಳ ಕುರಿತು ಅಮೆರಿಕದ ರಕ್ಷಣಾ ಇಲಾಖೆಯ ವರದಿಯನ್ನು ಕೇಂದ್ರವು ಗಮನಿಸಿದೆ ಎಂದೂ ಬಾಗ್ಚಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News