ನಾನು ಗುಜರಾತಿಗಿಂತ ಹಿಂದಿಯನ್ನು ಹೆಚ್ಚು ಪ್ರೀತಿಸುತ್ತೇನೆ: ಕೇಂದ್ರ ಗೃಹ ಸಚಿವ ಅಮಿತ್ ಶಾ

Update: 2021-11-13 13:10 GMT

ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ವಿಶ್ವದಾದ್ಯಂತ ಹಿಂದಿ ಭಾಷೆಯನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು ಹಾಗೂ  ಆಡಳಿತದ ಭಾಷೆ ಸ್ವಭಾಷಾವಾದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

ವಾರಣಾಸಿಯಲ್ಲಿ ನಡೆದ ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನದಲ್ಲಿ ಮಾತನಾಡಿದ ಶಾ, ತಾನು ಗುಜರಾತಿಗಿಂತ ಹಿಂದಿಯನ್ನು ಹೆಚ್ಚು ಪ್ರೀತಿಸುತ್ತೇನೆ ಹಾಗೂ  ರಾಷ್ಟ್ರದಾದ್ಯಂತ ಹಿಂದಿ ಮತ್ತು ಇತರ ಸ್ಥಳೀಯ ಭಾಷೆಗಳ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಹೇಳಿದರು.

"ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಡಿಯಲ್ಲಿ ನಾವು ಕಳೆದುಕೊಂಡಿರುವ ಸ್ವಭಾಷಾ ಗುರಿಯನ್ನು ನೆನಪಿಟ್ಟುಕೊಳ್ಳಲು ಮತ್ತು ಅದನ್ನು ನಮ್ಮ ಜೀವನದ ಭಾಗವಾಗಿಸಲು ನಾನು ದೇಶದ ಎಲ್ಲ ಜನರಿಗೆ ಕರೆ ನೀಡಲು ಬಯಸುತ್ತೇನೆ" ಎಂದು ಶಾ ಹೇಳಿದರು. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾಗವಹಿಸಿದ್ದರು.

ಹಿಂದಿ ಭಾಷೆಯ ಸುತ್ತ ವಿವಾದಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಆ ಸಮಯ ಈಗ ಕೊನೆಗೊಂಡಿದೆ. ಜಗತ್ತಿನಾದ್ಯಂತ ನಮ್ಮ ಭಾಷೆಗಳನ್ನು ಪ್ರಚಾರ ಮಾಡಲು ಹೆಮ್ಮೆಯಿಂದ ಕೆಲಸ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಶಾ ಹೇಳಿದರು.

ಸಮಾರಂಭದಲ್ಲಿ ಅಖಿಲ ಭಾರತ ಅಧಿಕೃತ ಭಾಷಾ ಸಮ್ಮೇಳನವನ್ನು ರಾಷ್ಟ್ರ ರಾಜಧಾನಿಯಿಂದ ಹೊರಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. “ನಾವು 2019 ರಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ.  ಆದರೆ ಕೋವಿಡ್‌ನಿಂದ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಈ ಹೊಸ ಶುಭ ಆರಂಭ ನಡೆಯುತ್ತಿರುವುದು ನನಗೆ ಖುಷಿ ತಂದಿದೆ'' ಎಂದು ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News