ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ

Update: 2021-11-13 12:42 GMT

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಇತರ 11 ಕ್ರೀಡಾಪಟುಗಳೊಂದಿಗೆ ಶನಿವಾರ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು.

ಜಾವೆಲಿನ್ ಥ್ರೋ ಫೈನಲ್‌ನಲ್ಲಿ 87.58 ಮೀಟರ್‌ಗಳ ದೂರಕ್ಕೆ ಈಟಿಯನ್ನು ಎಸೆಯುವ ಮೂಲಕ ಐತಿಹಾಸಿಕ ಟ್ರ್ಯಾಕ್ ಮತ್ತು ಫೀಲ್ಡ್ ಚಿನ್ನದ ಪದಕವನ್ನು ಗೆದ್ದ 23 ವರ್ಷದ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ವಿಜೇತ ಭಾರತದ ಎರಡನೇ ಕ್ರೀಡಾಪಟು ಹಾಗೂ ಅಥ್ಲೆಟಿಕ್ಸ್‌ನಲ್ಲಿ ಈ ಸಾಧನೆ ಮಾಡಿದ ಮೊದಲಿಗರಾಗಿದ್ದರು.

ಚೋಪ್ರಾ ಅವರಲ್ಲದೆ ಒಲಿಂಪಿಕ್ಸ್  ಬೆಳ್ಳಿ ಪದಕ ವಿಜೇತ ಕುಸ್ತಿಪಟು ರವಿ ದಹಿಯಾ, ಕಂಚು ವಿಜೇತ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್, ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್, ಹಾಕಿ ಆಟಗಾರರಾದ ಪಿ.ಆರ್. ಶ್ರೀಜೇಶ್ ಹಾಗೂ ಮನ್‌ಪ್ರೀತ್ ಸಿಂಗ್ ಅವರು ಪ್ರಶಸ್ತಿಯನ್ನು ಪಡೆದರು.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪ್ಯಾರಾ ಶೂಟಿಂಗ್‌ನಲ್ಲಿ ಚಿನ್ನ ಹಾಗೂ  ಕಂಚಿನ ಪದಕ ಗೆದ್ದ ಅವನಿ ಲೆಖರಾ ಅವರು ಇತರ ನಾಲ್ವರು  ಪ್ಯಾರಾ-ಅಥ್ಲೀಟ್‌ಗಳೊಂದಿಗೆ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದರು.

ಖೇಲ್ ರತ್ವವನ್ನು ಹಿಂದೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹಾಕಿಯಲ್ಲಿ ಭಾರತದ ದಾಖಲೆ ಪ್ರದರ್ಶನದ ನಂತರ ಲೆಜೆಂಡರಿ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಹೆಸರಿಟ್ಟು  ಮರುನಾಮಕರಣ ಮಾಡಿದ್ದರು.

12 ಖೇಲ್ ರತ್ನ ಗಳು: ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ರವಿ ದಹಿಯಾ (ಕುಸ್ತಿ), ಪಿ.ಆರ್. ಶ್ರೀಜೇಶ್ (ಹಾಕಿ),ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್),ಸುನೀಲ್ ಛೆಟ್ರಿ (ಫುಟ್ಬಾಲ್),ಮಿಥಾಲಿ ರಾಜ್ (ಕ್ರಿಕೆಟ್),ಮನ್‌ಪ್ರೀತ್ ಸಿಂಗ್ (ಹಾಕಿ),ಪ್ರಮೋದ್ ಭಗತ್ (ಬ್ಯಾಡ್ಮಿಂಟನ್‌),ಸುಮಿತ್ ಆಂಟಿಲ್ (ಜಾವೆಲಿನ್‌),ಅವನಿ ಲೇಖನಾ (ಶೂಟಿಂಗ್‌),ಕೃಷ್ಣ ನಗರ್  (ಬ್ಯಾಡ್ಮಿಂಟನ್‌),ಎಂ. ನರ್ವಾಲ್ (ಶೂಟಿಂಗ್‌).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News