ತ್ರಿಪುರಾದಲ್ಲಿ ಮಸೀದಿಗೆ ಧ್ವಂಸ ವರದಿ ನಕಲಿ, ಅಂತಹ ಯಾವುದೇ ಘಟನೆ ನಡೆದಿಲ್ಲ; ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ

Update: 2021-11-14 17:49 GMT

ಹೊಸದಿಲ್ಲಿ,ನ.14: ತ್ರಿಪುರಾಲ್ಲಿ ಮಸೀದಿಯೊಂದನ್ನು ಭಗ್ನಗೊಳಿಸಲಾಗಿದೆಯೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಹಾಗೂ ವಾಸ್ತವತೆಯ ಸಂಪೂರ್ಣ ತಿರುಚುವಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಶನಿವಾರ ತಿಳಿಸಿದೆ.
  
ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಹಾಗೆ ಅಂತಹ ಯಾವುದೇ ಘಟನೆಗಳು ತ್ರಿಪುರಾದಲ್ಲಿ ನಡೆದಿಲ್ಲ ಮತ್ತು ಯಾವುದೇ ವ್ಯಕ್ತಿ ಗಂಭೀರ ಗಾಯಗೊಂಡ ಅಥವಾ ಅತ್ಯಾಚಾರಕ್ಕೊಳಗಾದ ಅಥವಾ ಸಾವನ್ನಪ್ಪಿದ ಯಾವುದೇ ಘಟನೆ ವರದಿಯಾಗಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
  
ತೀರಾ ಇತ್ತೀಚಿಗೆ ತ್ರಿಪುರಾದಲ್ಲಿ ಯಾವುದೇ ಮಸೀದಿಯ ಕಟ್ಟಡಕ್ಕೆ ಹಾನಿಯೆಸಗಿದ ಯಾವುದೇ ಪ್ರಕರಣ ವರದಿಯಾಗಿಲ್ಲ. ಜನತೆ ಶಾಂತಿಯಿಂದ ವರ್ತಿಸಬೇಕು ಮತ್ತು ಇಂತಹ ನಕಲಿ ಸುದ್ದಿಗಳಿಂದಾಗಿ ತಪ್ಪುದಾರಿ ಹಿಡಿಯ ಕೂಡದು ಎಂದು ಕೇಂದ್ರ ಗೃಹ ಸಚಿವಾಲಯವು ರವಿವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ.
 
ತ್ರಿಪುರಾದ ಗೋಮತಿ ಜಿಲ್ಲೆಯ ಕಾಕ್ರಾಬನ್ ಪ್ರದೇಶದ ಮಸೀದಿಗೆ ಹಾನಿ ಮಾಡಲಾಗಿದೆ ಹಾಗೂ ಹಾಳುಗೆಡವಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇಂತಹ ಸುದ್ದಿಗಳು ಸುಳ್ಳು ಹಾಗೂ ವಾಸ್ತವತೆಗೆ ಸಂಪೂರ್ಣ ತಪ್ಪು ನಿರೂಪಣೆಯಾಗಿದೆ ಎಂದು ಹೇಳಿದೆ. ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿರುವ ಕಾಕ್ರಾಬನ್ನ ದರ್ಗಾಬಝಾರ್ ಪ್ರದೇಶದ ಮಸೀದಿಗೆ ಯಾವುದೇ ಹಾನಿಯಾಗಿಲ್ಲ ಹಾಗೂ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಪೊಲೀಸರು ಶ್ರಮಿಸುತ್ತಿದ್ದಾರೆಂದು ಅದು ಹೇಳಿದೆ.

ತ್ರಿಪುರಾದ ಕುರಿತಾದ ಹರಿದಾಡುತ್ತಿರುವ ನಕಲಿ ಸುದ್ದಿಗಳಿಂದಾಗಿ ಮಹಾರಾಷ್ಟ್ರದಲ್ಲಿ ಹಿಂಸಾಚಾರ ನಡೆದಿರುವುದು ವರದಿಯಾಗಿದೆ ಹಾಗೂ ಶಾಂತಿ, ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದ ಅಹಿತಕರವಾದ ಹೇಳಿಕೆಗಳನ್ನು ನೀಡಲಾಗುತ್ತಿದೆ. ಇದು ತುಂಬಾ ಕಳವಳಕಾರಿಯಾಗಿದೆ ಎಂದು ಹೇಳಿದ ಎಂದು ಗೃಹ ಸಚಿವಾಲಯ ತಿಳಿಸಿದೆ. ಎಷ್ಟೇ ಬೆಲೆತೆತ್ತಾದರೂ ಶಾಂತಿಯನ್ನು ಕಾಪಾಡಬೇಕೆಂದು ಅದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News