×
Ad

ಅಮರಾವತಿ ಬಂದ್ ವೇಳೆ ಮುಸ್ಲಿಮರ ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಆರೋಪ, 60 ಮಂದಿಯ ಸೆರೆ

Update: 2021-11-15 13:33 IST
Photo: Indianexpress.com

ಮುಂಬೈ: ಮಹಾರಾಷ್ಟ್ರದ ಅಮರಾವತಿಯಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ಬಂದ್ ಸಂದರ್ಭ ಮುಸ್ಲಿಂ ಸಮುದಾಯದ ವ್ಯಕ್ತಿಗಳಿಗೆ ಸೇರಿದ ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಿ ನಾಶಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 60 ಮಂದಿಯನ್ನು ಬಂಧಿಸಲಾಗಿದೆ ಎಂದು indianexpress.com ವರದಿ ಮಾಡಿದೆ.

ತ್ರಿಪುರಾದಲ್ಲಿ  ಇತ್ತೀಚೆಗೆ  ನಡೆದ ಕೋಮು ಹಿಂಸಾಚಾರವನ್ನು ಖಂಡಿಸಿ ಕಳೆದ ಶುಕ್ರವಾರ ಮುಸ್ಲಿಂ ಸಂಘಟನೆಯೊಂದು ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭ ಬಿಜೆಪಿ ನಾಯಕ ಪ್ರವೀಣ್ ಪೋಟೆ ಅವರ ನಿವಾಸಕ್ಕೆ ಕಲ್ಲೆಸೆಯಲಾದ ಘಟನೆಯನ್ನು ವಿರೋಧಿಸಿ ಶನಿವಾರ ಪ್ರತಿಭಟನೆ ವೇಳೆ ಸುಮಾರು 6000 ಬಿಜೆಪಿ ಮತ್ತು ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಅಮರಾವತಿಯ ರಾಜಕಮಲ್ ಚೌಕ್‍ನಲ್ಲಿ ಪ್ರವೀಣ್ ಅವರ ನಿರ್ದೇಶನದಂತೆ ಜಮಾಯಿಸಿದ್ದರು ಹಾಗೂ ಒಂದು ಗುಂಪು ಹಿಂಸೆಯಲ್ಲಿ  ತೊಡಗಿ ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಿತ್ತಲ್ಲದೆ ಕೆಲವು ಇತರ ಅಂಗಡಿಗಳಿಗೆ ಹಾನಿಗೈದು ವಾಹನಗಳಿಗೂ  ಬೆಂಕಿ ಹಚ್ಚಿತ್ತು" ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು ಸಂತ್ರಸ್ತರೆಲ್ಲರೂ ಅಲ್ಪಸಂಖ್ಯಾತ ಸಮುದಾಯದವರಾಗಿದ್ದಾರೆ ಎಂದಿದ್ದಾರೆ.

ಬೆಂಕಿ ಹಚ್ಚಲಾದ ಒಂದು ಮಳಿಗೆಯನ್ನು ಶಾದಬ್ ಖಾನ್ ಎಂಬವರು 1970ರಿಂದ ನಡೆಸುತ್ತಿದ್ದರು. ರೂ 13 ಲಕ್ಷದಷ್ಟು ನಷ್ಟ ಅನುಭವಿಸಿದೆ, ಹಿಂಸಾಕೋರರು ಮಳಿಗೆಯಲ್ಲಿದ್ದ ಇಲೆಕ್ಟ್ರಾನಿಕ್ ವಸ್ತುಗಳನ್ನೂ ಕಳವುಗೈದಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನೊಬ್ಬ ಅಂಗಡಿ ಮಾಲಿಕ ಫಿರೋಝ್ ಅಹ್ಮದ್ ಪ್ರತಿಕ್ರಿಯಿಸಿ ತಮ್ಮ ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದಾಗ ಪೊಲೀಸರು ಸುಮ್ಮನೆ ನೋಡುತ್ತಿದ್ದರು ಎಂದು ದೂರಿದ್ದಾರೆ. ಇದಕ್ಕೆ ಬಿಜೆಪಿ ನಾಯಕ ಪ್ರವೀಣ್ ಕಾರಣ ಎಂದು ಅವರು ದೂರುತ್ತಾರೆ.

ಶನಿವಾರದ ಹಿಂಸೆಯ ನಂತರ ಅಮರಾವತಿಯಲ್ಲಿ ನಾಲ್ಕು ದಿನಗಳ ಕರ್ಫ್ಯೂ ವಿಧಿಸಲಾಗಿದ್ದು ಇಂಟರ್ನೆಟ್ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News