"ಬುದ್ಧ ವಿಗ್ರಹ ಧ್ವಂಸ ಮಾಡಿದ್ದಕ್ಕಾಗಿ ಅಮೆರಿಕಾ ತಾಲಿಬಾನ್ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ" ಎಂದ ಆದಿತ್ಯನಾಥ್
ಲಕ್ನೋ: 20 ವರ್ಷಗಳ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು ನಾಶಪಡಿಸಿದ್ದರ ಕುರಿತು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕಾ ತಾಲಿಬಾನ್ ವಿರುದ್ಧ ಬಾಂಬ್ ದಾಳಿಗಳನ್ನು ನಡೆಸಿದ್ದು, ಅವರಿಗೆ ʼದೇವರು ನೀಡಿದ ಶಿಕ್ಷೆʼ ಎಂದು ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ.
ಲಕ್ನೋದಲ್ಲಿ ನಡೆದ ಸಾಮಾಜಿಕ ಪ್ರತಿನಿಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, "20 ವರ್ಷಗಳ ಹಿಂದೆ ಅಫ್ಘಾನಿಸ್ತಾನದ ಬಾಮಿಯಾನ್‌ನಲ್ಲಿ ತಾಲಿಬಾನ್‌ಗಳು 2,500 ವರ್ಷಗಳಷ್ಟು ಹಳೆಯ ಗೌತಮ ಬುದ್ಧನ ಪ್ರತಿಮೆಯನ್ನು ಧ್ವಂಸಗೊಳಿಸಿದ ದೃಶ್ಯಗಳನ್ನು ನೀವು ನೋಡಿರಬೇಕು. ತಾಲಿಬಾನ್‌ನ ಅನಾಗರಿಕತೆಯನ್ನು ಜಗತ್ತು ನೋಡಿದೆ. ಗೌತಮ ಬುದ್ಧ ಪ್ರಪಂಚದ ಮೇಲೆ ಎಂದಿಗೂ ಯುದ್ಧವನ್ನು ಹೇರಿಲ್ಲ, ಅವರು ಯಾವಾಗಲೂ ಮಾನವೀಯತೆಗೆ ಸ್ಫೂರ್ತಿಯ ಮೂಲ ಮತ್ತು ಭಕ್ತಿಯ ಕೇಂದ್ರವಾಗಿರುತ್ತಾರೆ. ಆದರೆ ಯಾವುದೇ ಭಾರತೀಯ ಅಥವಾ ಜಗತ್ತಿನಲ್ಲಿ ಎಲ್ಲಿಯೂ ಶಾಂತಿ ಮತ್ತು ಸೌಹಾರ್ದತೆಯನ್ನು ಬೆಂಬಲಿಸುವ ಯಾರಾದರೂ ತಾಲಿಬಾನಿಗರು ಪ್ರತಿಮೆಯನ್ನು ಧ್ವಂಸಗೊಳಿಸಿದ ದೃಶ್ಯಗಳನ್ನು ಮರೆಯಬಾರದು ಎಂದರು.
ಮುಂದುವರಿದು ಮಾತನಾಡಿದ ಅವರು, "ಅದಾದ ಕೆಲವೇ ದಿನಗಳಲ್ಲಿ ಅಮೆರಿಕಾ ಅಲ್ಲಿ ಬಾಂಬ್ ಗಳನ್ನು ಹಾಕಿತು ಮತ್ತು ತಾಲಿಬಾನಿಗಳನ್ನು ಕೊಲ್ಲಲಾಯಿತು ಎಂಬುದನ್ನು ನೀವು ನೋಡಿರಬೇಕು. ಅವರು ಗೌತಮ ಬುದ್ಧನ ಪ್ರತಿಮೆಯನ್ನು ಧ್ವಂಸ ಮಾಡಿದ್ದಕ್ಕಾಗಿ ದೇವರು ಅವರನ್ನು ಶಿಕ್ಷಿಸಿದ್ದಾನೆ." ಎಂದು ಹೇಳಿಕೆ ನೀಡಿದ್ದಾಗಿ ndtv.com ವರದಿ ಮಾಡಿದೆ.