ಅಮೆಝಾನ್‌ ಡೆಲಿವರಿ ವ್ಯವಸ್ಥೆಯನ್ನು ಬಳಸಿ ಗಾಂಜಾ ಸಾಗಾಟ: ಅಧಿಕಾರಿಗಳನ್ನು ಪ್ರಶ್ನಿಸಲಿರುವ ಮ.ಪ್ರ ಪೊಲೀಸರು

Update: 2021-11-16 08:26 GMT

ಭೋಪಾಲ್: ಇ-ಕಾಮರ್ಸ್ ಸಂಸ್ಥೆ ಅಮೆಝಾನ್ ಬಳಸಿ ಗಾಂಜಾ ಕಳ್ಳಸಾಗಣಿಕೆ ಮಾಡಲಾಗಿದೆ ಎಂಬ ಆರೋಪಗಳ ಕುರಿತಂತೆ ಮಧ್ಯಪ್ರದೇಶ ಪೊಲೀಸರ ತನಿಖೆಯ ಭಾಗವಾಗಿ ಸಂಸ್ಥೆಯ ಸ್ಥಳೀಯ ಅಧಿಕಾರಿಗಳನ್ನು ವಿಚಾರಣೆ ಮಾಡಲು ಅವರಿಗೆ ಸಮನ್ಸ್ ಕಳುಹಿಸಲಾಗಿದೆ.

ರವಿವಾರ ರಾಜ್ಯದಲ್ಲಿ ಪೊಲೀಸರು  ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ 20 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ಅವರು ಅಮೆಝಾನ್ ಇಂಡಿಯಾ ವೆಬ್ ತಾಣ ಬಳಸಿ ಆರ್ಡರ್ ಮಾಡಿ ಅವುಗಳನ್ನು ವಿವಿಧ ರಾಜ್ಯಗಳಿಗೆ ಕಳ್ಳಸಾಗಣಿಕೆ ನಡೆಸುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿತ್ತು.

ನೈಸರ್ಗಿಕ ಆಹಾರ ಸ್ವೀಟನರ್ ಆಗಿರುವ ಡ್ರೈ ಸ್ಟೀವಿಯಾ ಲೀವ್ಸ್ ಹೆಸರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಇಲ್ಲಿಯ ತನಕ ಅಮೆಝಾನ್ ಬಳಸಿ ಈ ರೀತಿ  ಅಂದಾಜು ರೂ 1.1 ಕೋಟಿ ಮೌಲ್ಯದ 1,000 ಕೆಜಿ ಡ್ರಗ್ಸ್  ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಯಾವುದೇ ಉಲ್ಲಂಘನೆಯಾಗಿದೆಯೇ ಎಂದು ಸಂಸ್ಥೆ ಪರಿಶೀಲಿಸುತ್ತಿದೆ, ಭಾರತದ ಕಾನೂನಿನನ್ವಯ ಯಾವುದೇ ನಿಷೇಧಿತ ವಸ್ತುವಿನ ಮಾರಾಟ ಮಾಡಲು ಅಮೆಝಾನ್ ಅನುಮತಿಸುವುದಿಲ್ಲ" ಎಂದು ಸಂಸ್ಥೆಯ ವಕ್ತಾರರು ಹೇಳಿಕೆಯೊಂದರಲ್ಲಿ ತಿಳಿಸಿದ್ದು ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News