ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ

Update: 2021-11-16 17:35 GMT

ಸುಲ್ತಾನ್‌ಪುರ (ಉತ್ತರಪ್ರದೇಶ),ನ.16: ಸುಮಾರು 22,500 ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ 340 ಕಿ.ಮೀ. ವಿಸ್ತೀರ್ಣದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೇಶಕ್ಕೆ ಸಮರ್ಪಿಸಿದರು. ಹೆದ್ದಾರಿ ಮೇಲೆ ವಾಯುಪಡೆಯ ಸಿ-130ಜೆ ಸೂಪರ್ ಹರ್ಕ್ಯೂಲಿಸ್ ವಿಮಾನದಲ್ಲಿ ಬಂದಿಳಿದ ಪ್ರಧಾನಿ, ಆನಂತರ ನಡೆದ ಕಾರ್ಯಕ್ರಮದಲ್ಲಿ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಈ ಹೆದ್ದಾರಿಯು ಉತ್ತರಪ್ರದೇಶವನ್ನು ಒಗ್ಗೂಡಿಸಲಿದೆ ಎಂದರು. ‘‘ ಮೂರು ವರ್ಷಗಳ ಹಿಂದೆ ಈ ಹೆದ್ದಾರಿಗೆ ಶಿಲಾನ್ಯಾಸವನ್ನು ಮಾಡಿದಾಗ ನಾನು ಒಂದು ದಿನ ಅದೇ ಹೆದ್ದಾರಿಯಲ್ಲಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿಯಲಿದ್ದೇನೆ ಎಂದು ಯಾವತ್ತೂ ಯೋಚಿಸಿರಲಿಲ್ಲ. ಆದರೆ ಅದು ಈಗ ಸಾಕಾರಗೊಂಡಿದೆ ಎಂದರು. ನೂತನ ಹೆದ್ದಾರಿಯು ಬಡವರು, ಮಧ್ಯಮವರ್ಗ, ರೈತರು ಹಾಗೂ ವರ್ತಕರಿಗೆ ನೆರವಾಗಲಿದೆ ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದರು.

ಈ ಹಿಂದೆ ಉತ್ತರಪ್ರದೇಶದಲ್ಲಿ ಆಡಳಿತ ನಡೆಸಿದ್ದ ಸರಕಾರಗಳೆಲ್ಲವೂ ದುರಾಡಳಿತದ ಮೂಲಕ ಆ ರಾಜ್ಯವನ್ನು ದಂಡಿಸಿವೆ ಎಂದು ಮೋದಿ ವಾಗ್ದಾಳಿ ನಡೆಸಿದರು. ಉತ್ತರಪ್ರದೇಶದ ಎಂಪಿಯಾಗಿ ನಾನು ರಾಜ್ಯದ ಜನರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಂಡಿದ್ದೇನೆ. ಈ ಹಿಂದೆ ಆಡಳಿತ ನಡೆಸಿದ್ದ ಸರಕಾರಗಳ ತಾರತಮ್ಯ ನೀತಿ ಹಾಗೂ ಆಳುವವರು ತಮ್ಮ ಕುಟುಂಬದ ಏಳಿಗೆಗೆ ಮಾತ್ರ ಪ್ರಾಶಸ್ಯ ನೀಡಿರುವುದು, ಇವೆಲ್ಲವುಗಳಿಂದ ರೋಸಿಹೋದ ಉತ್ತರಪ್ರದೇಶದ ಜನತೆ 2017ರಲ್ಲಿ ಮಾಡಿದಂತೆ ಅವರನ್ನು ರಾಜ್ಯದ ಅಭಿವೃದ್ಧಿಯ ಪಥದಿಂದ ಶಾಶ್ವತವಾಗಿ ಕಿತ್ತೊಗೆಯಲಿದ್ದಾರೆ ಎಂದರು.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ,ಜನರನ್ನುದ್ದೇಶಿಸುತ್ತಾ ‘‘ 2014ರಲ್ಲಿ ಈ ದೇಶದ ಸೇವೆ ಸಲ್ಲಿಸುವ ಅವಕಾಶವನ್ನು ನೀವು ನನಗೆ 2014ರಲ್ಲಿ ನೀಡಿದಾಗ, ನಾನು ಉತ್ತರಪ್ರದೇಶದ ಆಡಳಿತಕ್ಕೆ ಸಂಬಂಧಪಟ್ಟ ವಿವರಗಳನ್ನು ಪರಿಶೀಲಿಸಲು ತೊಡಗಿದೆ. ಆದರೆ ಅಖಿಲೇಶ್ ಸರಕಾರ ಅದಕ್ಕೆ ಸಕರಿಸಲಿಲ್ಲ. ಸಾರ್ವಜನಿಕವಾಗಿ ನನ್ನೊಂದಿಗೆ ನಿಲ್ಲುವ ಮೂಲಕ ತಮ್ಮ ವೋಟ್ ಬ್ಯಾಂಕ್‌ಗಳು ಎಲ್ಲಿ ಕೈತಪ್ಪಿಹೋಗುವುದೋ ಎಂಬ ಭೀತಿ ಅವರನ್ನು ಕಾಡುತ್ತಿತು’’್ತ ಎಂದರು.

ಕೋವಿಡ್ ಎರಡನೆ ಅಲೆಯ ನಿರ್ವಹಣೆಯ ಕುರಿತು ತೀವ್ರ ಟೀಕೆಯನ್ನು ಎದುರಿಸಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತವನ್ನು ಪ್ರಧಾನಿ ಮುಕ್ತಕಂಠದಿಂದ ಪ್ರಶಂಸಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಸಾವಿರಾರು ಕಿಲೋಮೀಟರ್ ರಸ್ತೆಗಳನು ನಿರ್ಮಾಣವಾಗಿವೆ ಪಾಗೂ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಿವೆ. ಈವರೆಗೆ ರಾಜ್ಯವು 14 ಕೋಟಿಗೂ ಅಧಿಕ ಲಸಿಕೆಗಳನ್ನು ರಾಜ್ಯವು ತನ್ನ ಜನತೆಗೆ ನೀಡಿದೆ ಎಂದರು.

 ಹೆದ್ದಾರಿಯಲ್ಲಿ ನಿರ್ಮಿಸಲಾದ 32 ಕಿ.ಮೀ. ವಿಸ್ತೀರ್ಣದ ತುರ್ತುಸ್ಥಿತಿ ವಿಮಾನ ಇಳಿದಾಣ (ಏರ್‌ಸ್ಟ್ರಿಪ್) ವನ್ನು ಕೂಡಾ ಪ್ರಧಾನಿ ಲೋಕಾರ್ಪಣೆಗೊಳಿಸಿದರು.ಆ ಸಂದರ್ಭ ಪ್ರದರ್ಶಿಸಿದ ಪ್ರಾತ್ಯಕ್ಷಿಕೆಯಲ್ಲಿ ಮೀರೆಜ್ 2000 ವಿಮಾನವು ಹೆದ್ದಾರಿಯಲ್ಲಿ ನಿರ್ಮಿಸಲಾದ ಏರ್‌ಸ್ಟ್ರಿಪ್‌ನಲ್ಲಿ ಸುರಕ್ಷಿತವಾಗಿ ಬಂದಿಳಿಯಿತು.

ಪ್ರಧಾನಿ ಪಾಲ್ಗೊಂಡ ಈ ಕಾರ್ಯಕ್ರಮಕ್ಕಾಗಿ ಜನರನ್ನು ಕರೆತರಲು 2 ಸಾವಿರಕ್ಕೂ ಅಧಿಕ ಬಸ್‌ಗಳ ವ್ಯವಸ್ಥೆ ನೀಡಲಾಗಿತ್ತು. ಇದರಿಂದಾಗಿ ಕೆಲ ಭಾಗಗಳಲ್ಲಿ ಬೆಳಗ್ಗಿನ ವೇಳೆ ದಿನನಿತ್ಯದ ಕರ್ತವ್ಯಗಳಿಗೆ ತೆರಳುತ್ತಿದ್ದ ಸ್ಥಳೀಯರಿಗೆ ತೊಂದರೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಾರಣಾಸಿ ಹಾಗೂ ಫೈಝಾಬಾದ್‌ನಲ್ಲಿ ಬಸ್‌ಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿತ್ತೆಂಬುದನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.ಈ ಬಸ್‌ಗಳನ್ನು ಪ್ರಧಾನಿಯ ಕಾರ್ಯಕ್ರಮಕ್ಕಾಗಿ ಸುಲ್ತಾನ್‌ಪುರ ಜಿಲ್ಲೆಗೆ ಕೊಂಡೊಯ್ಯಲಾಗಿತ್ತೆಂದು ಅವರು ಹೇಳಿದ್ದಾರೆ.

ಸುಮಾರು 22,500 ಕೋಟಿ ರೂ. ವೆಚ್ಚದಲ್ಲಿ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಎಕ್ಸ್‌ಪ್ರೆಸ್ 6ಲೇನ್‌ಗಳನ್ನು ಹೊಂದಿದ್ದು ಭವಿಷ್ಯದಲ್ಲಿ ಅದನ್ನು ಎಂಟು ಲೇನ್‌ಗಳಾಗಿ ಅಭಿವೃದ್ಧಿಪಡಿಸಬಹುದಾಗಿದೆ ಎಂದರು.

ಪೂರ್ವಾಂಚಲ ಎಕ್ಸ್‌ಪ್ರೆಸ್ ಹೆದ್ದಾರಿಯು ಉತ್ತರಪ್ರದೇಶದ ಈಶಾನ್ಯ ಜಿಲ್ಲೆಗಳಾದ ಲಕ್ನೋ, ಬಾರಾಬಂಕಿ, ಅಮೇಠಿ, ಆಯೋಧ್ಯಾ, ಸುಲ್ತಾನ್‌ಪುರ, ಅಂಬೇಡ್ಕರ್ ನಗರ, ಅಝಂಗಢ, ಮಾವು ಹಾಗೂ ಗಾಝಿಪುರ ಜಿಲ್ಲೆಗಳ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲಿದೆ ಎಂದು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News