×
Ad

ಬಿಹಾರದಲ್ಲಿ ಭೀಕರ ರಸ್ತೆ ಅಪಘಾತ: ಸುಶಾಂತ್ ಸಿಂಗ್ ರಜಪೂತ್ ರ ಐವರು ಸಂಬಂಧಿಕರು ಮೃತ್ಯು

Update: 2021-11-16 17:52 IST
photo: twitter.com/Vipinsrivasta15

ಹೊಸದಿಲ್ಲಿ, ನ. 16: ಬಿಹಾರದ ಲಖಿಸರಾಯಿಯಲ್ಲಿ ಮಂಗಳವಾರ ನಡೆದ ಕಾರು ಅಪಘಾತದಲ್ಲಿ ಬಾಲಿವುಡ್ ನ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಾಲ್ವರು ಸಂಬಂಧಿಕರು ಸೇರಿದಂತೆ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. 10 ಮಂದಿ ಪ್ರಯಾಣಿಸುತ್ತಿದ್ದ ಸುಮೋ ವಿಕ್ಟಾ ಕಾರು ಟ್ರಕ್ಗೆ ಢಿಕ್ಕಿ ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲೇ ಮೃತಪಟ್ಟರು. ಇತರ ನಾಲ್ವರು ಗಂಭೀರ ಗಾಯಗೊಂಡರು. 

ಮೃತಪಟ್ಟವರು ಹಾಗೂ ಗಾಯಗೊಂಡವರು ಬಿಹಾರದ ಜಮುಯಿ ಜಿಲ್ಲೆಯ ನಿವಾಸಿಗಳು. ಸುಶಾಂತ್ ರಜಪೂತ್ ಅವರ ಭಾವ ಹಾಗೂ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಸಿಂಗ್ ಅವರ ನಾಲ್ಕು ಮಂದಿ ಸಂಬಂಧಿಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪಾಟ್ನಾದಲ್ಲಿ ನಡೆದ ಓಂ ಪ್ರಕಾಶ್ ಸಿಂಗ್ ಅವರ ಸಹೋದರಿಯ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡು ಹಿಂದಿರುಗುವ ಸಂದರ್ಭ ಈ ಅಪಘಾತ ಸಂಭವಿಸಿದೆ. 

ಸಾವನ್ನಪ್ಪಿದ 6 ಮಂದಿ ಜಮುಯಿ ಜಿಲ್ಲೆಯ ಖೈರಾ ಪೊಲೀಸ್ ಠಾಣಾ ವ್ಯಾಪ್ತಿಯ ಬಾಂದ್ರಾ ಗ್ರಾಮದ ನಿವಾಸಿಗಳು. ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಸಿಂಗ್ ಅವರ ಇಬ್ಬರು ಪುತ್ರರು ಹಾಗೂ ಪುತ್ರಿ ಸೇರಿದಂತೆ 10 ಮಂದಿ ಸುಮೋ ವಿಕ್ಟರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಶೇಖ್ ಪುರ ರಸ್ತೆಯ ಪಿಪ್ರಾ ಸಮೀಪ ಅಪಘಾತ ಸಂಭವಿಸಿದೆ. ಈ ಪ್ರದೇಶ ಲಖಿಸರಾಯಿ ಜೆಲ್ಲೆಯ ಹಲ್ಸಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರುತ್ತದೆ. ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. 

ಗಾಯಗೊಂಡವರನ್ನು ಜಮುಯಿಯ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಇತರ ಇಬ್ಬರನ್ನು ಪಾಟ್ನಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಆರು ಮಂದಿಯನ್ನು ಲಾಲ್ಜಿತ್ ಸಿಂಗ್, ನೇಮನಿ ಸಿಂಗ್, ರಾಮಚಂದ್ರ ಸಿಂಗ್, ಬೇಬಿ ಸಿಂಗ್, ಅನಿತಾ ಸಿಂಗ್ ಹಾಗೂ ಪ್ರೀತಂ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News