ಉತ್ತರ ಪ್ರದೇಶ: ಮೀರತ್ ಶಾಲೆಯಲ್ಲಿ ಮಧ್ಯಾಹ್ನದ ಊಟವಾಗಿ ಬಿಸ್ಕೆಟ್ ವಿತರಣೆ!

Update: 2021-11-17 13:37 GMT
ಸಾಂದರ್ಭಿಕ ಚಿತ್ರ

ಮೀರತ್: ಶಿಕ್ಷಣ ಇಲಾಖೆಯ ತಂಡವು ನಗರದ ಶಾಲೆಗಳಲ್ಲಿ ತಪಾಸಣೆ ನಡೆಸಿದಾಗ ಜೈ ಕಿಶನ್ ಇಂಟರ್ ಕಾಲೇಜಿನಲ್ಲಿ ಮಧ್ಯಾಹ್ನದ ಊಟದ ಯೋಜನೆಯಡಿ ಮಕ್ಕಳಿಗೆ ಬಿಸ್ಕತ್ ಮಾತ್ರ ವಿತರಿಸುತ್ತಿರುವುದು ಕಂಡುಬಂದಿದೆ. ಇನ್ನೊಂದು ಪ್ರಾಥಮಿಕ ಶಾಲೆಯು ಮಧ್ಯಾಹ್ನದ ಊಟದ ಮೆನು ಪ್ರಕಾರ "ಸಮರ್ಪಕ" ಊಟವನ್ನು ನೀಡುತ್ತಿಲ್ಲ. ಏಕೆಂದರೆ ಗ್ರಾಮ ಪ್ರಧಾನ್ ತನ್ನ ಮನೆಯೊಳಗೆ ಪಡಿತರವನ್ನು ಸಂಗ್ರಹಿಸಿದ್ದಾನೆ ಎಂದು ಆರೋಪಿಸಲಾಗಿದೆ ಎಂದು Timesofindia ವರದಿ ಮಾಡಿದೆ.

ದಾಳಿಯ ಸಂದರ್ಭದಲ್ಲಿ ಜೈ ಕಿಶನ್ ಇಂಟರ್ ಕಾಲೇಜಿನ ಶಾಲಾ ಅಧಿಕಾರಿಗಳು ವಿದ್ಯಾರ್ಥಿಗಳು "ಕಡಿಮೆ ಹಾಜರಾತಿ" ಇರುವುದರಿಂದ ಹೀಗೆ ಮಾಡಲಾಗುತ್ತಿದೆ ಎಂದು ತಂಡಕ್ಕೆ ತಿಳಿಸಿದರು ಎನ್ನುವುದಾಗಿ ಇಲಾಖೆ ತಿಳಿಸಿದೆ.

ಜೈ ಕಿಶನ್ ಇಂಟರ್ ಕಾಲೇಜಿನ ಪ್ರಾಂಶುಪಾಲ ಇಂದ್ರೇಶ್ ಕುಮಾರ್ ನಂತರ ಆಂಗ್ಲ ಪತ್ರಿಕೆಯೊಂದಿಗೆ ಮಾತನಾಡುತ್ತಾ, "ಶಾಲೆಯಲ್ಲಿ ಸರಿಯಾದ ಆಹಾರವಿತ್ತು. ನಾನು ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತೇನೆ" ಎಂದು ಹೇಳಿದರು.

 “ಉರ್ದು ಉಪ ನಿರೀಕ್ಷಕ ಅಮರವೀರ್ ಸಿಂಗ್ ಅವರನ್ನೊಳಗೊಂಡ ತಂಡವು ಮಂಗಳವಾರ ಹಲವಾರು ಸರಕಾರಿ ಶಾಲೆಗಳಿಗೆ ಭೇಟಿ ನೀಡಿತು. ಎರಡನೇ ಲಾಕ್‌ಡೌನ್ ನಂತರ ಶಾಲೆಗೆ ಹಿಂತಿರುಗಿದ ಜೈ ಕಿಶನ್ ಇಂಟರ್ ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಆಹಾರ ಸಿಗಲಿಲ್ಲ. ಸರಿಯಾದ ಊಟದ ಬದಲು ಪಾರ್ಲೆ ಬಿಸ್ಕೆಟ್ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ನಮಗೆ ತಿಳಿಸಿದರು’’ ಎಂದು ಮೀರತ್‌ನ ವಿಭಾಗೀಯ ಸಂಯೋಜಕ ವೀರೇಂದ್ರ ಕುಮಾರ್ ಹೇಳಿದ್ದಾರೆ.

ಮೇಲ್ನೋಟಕ್ಕೆ ಜೈ ಕಿಶನ್‌ನ ಪ್ರಾಂಶುಪಾಲರು ಹಾಗೂ  ಎನ್‌ಜಿಒ ಮಧ್ಯಾಹ್ನದ ಊಟಕ್ಕೆ ಮೀಸಲಾದ ಹಣವನ್ನು ತಮ್ಮೊಳಗೆ ಹಂಚಿಕೆ ಮಾಡಿಕೊಂಡಂತೆ ತೋರುತ್ತಿದೆ ಎಂದು ಕುಮಾರ್ ಹೇಳಿದರು. ಎನ್‌ಜಿಒ ಹಾಗೂ  ಪ್ರಾಂಶುಪಾಲರು ಸಹ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News