‘ಜೈ ಭೀಮ್’ ಸಿನೆಮಾ ಮತ್ತು ಸಮಾಜಕ್ಕೆ ಬೇಕಾಗಿರುವ ಒಳ್ಳೆಯ ಮನುಷ್ಯರು

Update: 2021-11-17 19:30 GMT

ಭಾಗ-3   

ಲೋಹಿಯಾ ಅವರು ‘ಜ್ಞಾನಿಯಲ್ಲಿ ಮಿಲನಗೊಂಡ ಸಂತನ ಮಾದರಿ’ ನಮಗೀಗ ಬಹಳ ಅಗತ್ಯ ಎನ್ನುತ್ತಾರೆ. ಇದೇ ಪರಿಕಲ್ಪನೆಯನ್ನು ತುಸು ಗೇಲಿ ಮಾಡುವ ಮಾದರಿಯಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ಎದುರಾ ಬದುರು ನಿಲ್ಲಿಸಿ ಅರುಂಧತಿ ರಾಯ್ ಅವರು ‘ಡಾಕ್ಟರ್ ಆ್ಯಂಡ್ ದ ಸೈಂಟ್’ ಕೃತಿ ಬರೆದರು. ಆದರೆ ದೇವನೂರರು ಹೀಗೆ ಎದುರಾ ಬದುರು ನಿಲ್ಲಿಸುವುದು ಸರಿಯಲ್ಲ ಎಂದು ಹೇಳಿ ಗಾಂಧಿ ಮತ್ತು ಬಾಬಾ ಸಾಹೇಬರನ್ನು ಅವಿಭಕ್ತ ಕುಟುಂಬದೊಳಗಿನ ಸದಸ್ಯರ ಸಂಘರ್ಷದ ಮಾದರಿಯ ಮೂಲಕ ವಿವರಿಸಿದರು. ಲೋಹಿಯಾ ಕೂಡ ಇದೇ ಸಿಂಥೆಸಿಸ್ ಮಾದರಿಯನ್ನು ಹೆಚ್ಚಾಗಿ ಬಳಸುತ್ತಾರೆ. ಡಾಕ್ಟರ್ ವರ್ಸಸ್ ಸೈಂಟ್ ಎಂಬುದು ಗಾಂಧಿ ಮತ್ತು ಬಾಬಾ ಸಾಹೇಬರ ವಿಚಾರದಲ್ಲಿ ಪೂರ್ಣ ಸತ್ಯವಲ್ಲ. ಯಾಕೆಂದರೆ ಬಾಬಾ ಸಾಹೇಬರೊಳಗೊಬ್ಬ ಸಂತನಿದ್ದ. ಗಾಂಧಿಯವರೊಳಗೊಬ್ಬ ವೈದ್ಯನಿದ್ದ. ಗಾಂಧಿಯರೊಳಗಿದ್ದ ವೈದ್ಯ ಹೇಳಿದ ಶತಮಾನಗಳಿಂದ ಸಮಾಜದೊಳಗಿದ್ದ ವ್ರಣವನ್ನು ಅನಾಮತ್ತಾಗಿ ಕತ್ತರಿಸಿ ಎಸೆಯಲಾಗದು. ಅದಕ್ಕೂ ಮೊದಲು ರೋಗಿಗೆ ದೊಡ್ಡ ಮಟ್ಟದ ಕೌನ್ಸೆಲಿಂಗಿನ ಅಗತ್ಯವಿದೆ. ಹಾಗಾಗಿ ತುಸು ಕಾಲ ಬೇಕು ಎಂದರು.

ಇದಕ್ಕೆ ಬಾಬಾ ಸಾಹೇಬರು ಸಿಡಿದೆದ್ದರು. ಈಗಲ್ಲದಿದ್ದರೆ ಯಾವಾಗಲೂ ಆಪರೇಷನ್ ಸಾಧ್ಯವಾಗಲಿಕ್ಕಿಲ್ಲ. ಈಗಲೇ ಆಗಲಿ ಎಂದರು. ಅದು ಆಗಲಿಲ್ಲ. ಗಾಂಧಿಯವರ ಆ ನಿಲುವು ದಮನಿತ ಸಮುದಾಯದೊಳಗೆ ನೋವು ಕರಗದೆ ಶಮನವಾಗದೆ ಉಳಿದುಕೊಂಡಿದೆ. ಆದರೆ ಇಬ್ಬರು ದಾರ್ಶನಿಕರು ಕೂಡ ಮನುಷ್ಯರು ಒಳ್ಳೆಯವರಾಗಬೇಕು ಇಲ್ಲದಿದ್ದರೆ ಸಮಾಜಕ್ಕೆ ಉಳಿಗಾಲವಿಲ್ಲ ಎಂದು ಹೋರಾಡಿದರು. ಬಾಬಾ ಸಾಹೇಬರು ಸಂವಿಧಾನ ರಚಿಸಿ ಅದರ ಮೂಲಕವೂ ನೋಡಿದರು. ಕಡೆಗೆ ಬುದ್ಧನ ಮೊರೆ ಹೋದರು. ಗಾಂಧಿಯವರು ಮನುಷ್ಯನ ಕೇಡು ನೋಡಿ ‘‘ಹೇ ರಾಮ್’’ ಎಂದು ನೆಲಕ್ಕೆ ಒರಗಿದರು. ಕೇಡು ಅಬಾಧಿತವಾಗಿ ಉಳಿದೇ ಇದೆ ಎಂಬ ಕಾರಣಕ್ಕೆ ಸಂವಿಧಾನ ಬಂದು 43 ವರ್ಷಗಳಾದ ಮೇಲೂ ಜೈ ಭೀಮ್ ಸಿನೆಮಾ ಬರುತ್ತಿದೆ. ಲಂಕೇಶ್ ಅವರು ಮನುಷ್ಯ ಧ್ಯಾನಿಸಿದಷ್ಟೂ ಆಳವಾಗಿ ಕಾಡುವ ಸಂಗತಿಗಳಲ್ಲಿ ಪ್ರೇಮ ಮತ್ತು ಕಾಮಗಳಿವೆ ಎನ್ನುತ್ತಾರೆ. ಆದರೆ ಇವೆರಡನ್ನೂ ಮೀರಿ ಮನುಷ್ಯರ ಕೇಡು ಮತ್ತು ಒಳ್ಳೆಯತನಗಳ ಕುರಿತಾದ ಸಂಗತಿಗಳು ಕಾಡುತ್ತಿವೆ. ಪ್ರಮೇಯಗಳ ವಿಚಾರದಲ್ಲಿ ನಮಗೆ ತಕ್ಷಣಕ್ಕೆ ನೆನಪಾಗುವುದು ಬೌದ್ಧ ದರ್ಶನವೇ. ಈ ದರ್ಶನದ ಕುರಿತು ಬಾಬಾಸಾಹೇಬರಿಗೆ ಮತ್ತು ಉತ್ತರಾರ್ಧದ ಗಾಂಧೀಜಿಯವರಿಗೆ ಸಹಮತಿ ಇದೆ. ಬಹುಶಃ ಲೋಹಿಯಾ ಅವರಿಗೂ ತಕರಾರುಗಳಿರಲಿಕ್ಕಿಲ್ಲ.

ಬೌದ್ಧರ ಪಂಚಶೀಲ ಮತ್ತು ಅಷ್ಟಾಂಗ ಸೂತ್ರಗಳ ಮೂಲ ಉದ್ದೇಶವೇ ಮನುಷ್ಯನನ್ನು ಒಳ್ಳೆಯವನನ್ನಾಗಿಸುವುದು. ಹುಸಿಯ ನುಡಿಯದೆ, ಕದಿಯದೆ, ಕೊಲ್ಲದೆ, ವ್ಯಭಿಚಾರ ಮಾಡದೆ, ಇತರರ ನಿಂದಿಸದೆ ಬದುಕುವುದನ್ನೇ ಬಹುಶಃ ಒಳ್ಳೆಯತನ ಎಂದು ಅವರು ಕರೆದರು. ಆಸೆಯು ಹಿಂಸೆಗೆ ಎಳೆದೊಯ್ಯುವ ಗೂಳಿ ಎಂದರು. ಬಸವಣ್ಣನವರೂ ಇದನ್ನೇ ಹೇಳಿದರು, ಆದರೆ ಈ ತತ್ವವನ್ನು ಇನ್ನಷ್ಟು ವಿಸ್ತರಿಸಿದರು. ದ್ವೇಷ ಮಾಡದೆ, ಇವನಾರವ ಎನ್ನದೆ, ಅಸಹ್ಯ ಪಡದೆ ಎಲ್ಲರನ್ನೂ ಒಳಗೊಂಡು ಬಾಳುವುದು ಹೇಗೆ ಎಂಬುದರ ಕುರಿತು ಪ್ರಮೇಯಗಳನ್ನು ಹೇಳಿದರು. ಬಸವಣ್ಣನವರಿಗಿಂತ ಒಂದೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ್ದ ಬುದ್ಧನಿಗೆ ಮನುಷ್ಯರನ್ನು ಹೊರಗಿಡುವ, ಒಳಗೊಳ್ಳುವ ರಾಜಕಾರಣ ಎಂಬುದು ಇನ್ನೂ ಕ್ರೌರ್ಯದ ರೂಪ ಪಡೆದುಕೊಂಡಿರಲಿಲ್ಲ. ಮನುಷ್ಯರೊಳಗೆ ಈ ಪಂಚಶೀಲಗಳು ಸುಮ್ಮನೆ ರೂಪುಗೊಳ್ಳುವುದಿಲ್ಲ. ಅದಕ್ಕಾಗಿ ಅಷ್ಟಾಂಗ ಮಾರ್ಗಗಳನ್ನು ಅನುಸರಿಸಬೇಕು. ಸಮ್ಯಕ್ ಜ್ಞಾನ, ದೃಷ್ಟಿ, ಯೋಚನೆ, ಏಕಾಗ್ರತೆ, ಮುಂತಾದವುಗಳೆಲ್ಲ ಇರಬೇಕು. ಶರಣರು ಅನೇಕ ವಚನದಲ್ಲೂ ಈ ದೃಷ್ಟಿಯ ಹೊಳಹುಗಳನ್ನು ನೀಡುತ್ತಾರೆ. ಇದನ್ನೇ ಪಶ್ಚಿಮವು ‘ಕ್ರಿಟಿಕಲ್ ಥಿಂಕಿಂಗ್’ ಎಂದು ವ್ಯಾಖ್ಯಾನಿಸುತ್ತದೆ.

ಗಾಂಧೀಜಿ ಶಿಕ್ಷಣದಲ್ಲಿ ‘3 ಎಚ್’ ಸೂತ್ರ ಹೇಳಿದ್ದು ಕೂಡ ತುಸು ಇದೇ ಹಿನ್ನೆಲೆಯಲ್ಲಿ. ಹೃದಯ, ಮೆದುಳು ಮತ್ತು ಕೌಶಲ್ಯ (ಹ್ಯಾಂಡ್, ಹಾರ್ಟ್ ಆ್ಯಂಡ್ ಹೆಡ್)ಗಳು ಸೇರಿ ರೂಪುಗೊಂಡ ಶಿಕ್ಷಣವು ತುಸು ಮಟ್ಟಿಗೆ ಮನುಷ್ಯರನ್ನು ಒಳ್ಳೆಯವರನ್ನಾಗಿಸಲು ನೆರವಾಗುತ್ತವೆ. ಗಾಂಧಿ ಮತ್ತು ಬಾಬಾ ಸಾಹೇಬರ ನಡುವೆ ಅಸ್ಪಶ್ಯತೆಯ ವಿಚಾರಕ್ಕಾಗಿ ಹುಟ್ಟಿದ ಸಂಘರ್ಷದಲ್ಲಿ ಗಾಂಧಿಯವರು ಹಠ ಮಾಡಿ ಗೆದ್ದರು ಎಂಬ ಭಾವನೆ ನಮ್ಮಿಳಗೆ ಉಳಿದುಕೊಂಡಿದೆ. ಆದರೆ ಬಾಬಾ ಸಾಹೇಬರು ಸಂವಿಧಾನ ಸಮರ್ಪಣೆಯ ಸಂದರ್ಭದಲ್ಲಿ ಮಾಡಿದ ಐತಿಹಾಸಿಕ ಭಾಷಣ ಮತ್ತು ಅದರ ನಂತರದ ಬೆಳವಣಿಗೆಗಳನ್ನು ಗಮನಿಸಿದರೆ ಅವರಿಗೆ ಮನುಷ್ಯ ಒಳ್ಳೆಯವನಾಗದೆ ಬೇರೆ ಏನು ಮಾಡಿದರೂ ಸುಧಾರಣೆ ಸಾಧ್ಯವಿಲ್ಲ ಅನ್ನಿಸಿದ ಹಾಗೆ ಕಾಣುತ್ತದೆ. ಈ ಬಿಂದುವಿನಲ್ಲಿ ಬುದ್ಧ, ಬಸವಣ್ಣ, ಬಾಬಾ ಸಾಹೇಬರು ಮತ್ತು ಗಾಂಧೀಜಿ ಹಾಗೂ ಲೋಹಿಯಾ, ಟಾಗೂರ್ ಮುಂತಾದ ದಾರ್ಶನಿಕರೆಲ್ಲ ಮುಖಾಮುಖಿತನವನ್ನು ಮರೆತು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ. ಮನುಷ್ಯರು ಒಳ್ಳೆಯವರಾಗದೆ ಅನ್ಯ ದಾರಿಗಳಿಲ್ಲ ಎಂದು ತೀವ್ರವಾಗಿ ಅನ್ನಿಸದೆ ಹೋದರೆ ಯಾವ ನಾಗರಿಕತೆಗಳಿಗೂ ಉಳಿಗಾಲವಿಲ್ಲ ಎಂಬುದು ಇವರೆಲ್ಲರಿಗೂ ಅನ್ನಿಸಿತ್ತು. ಬಾಬಾ ಸಾಹೇಬರು ರಚಿಸಿದ ಸಂವಿಧಾನದ ಮೂಲ ಆಶಯವೂ ಒಳ್ಳೆಯ ಮನುಷ್ಯರನ್ನು ನಿರ್ಮಾಣ ಮಾಡುವುದೇ ಆಗಿದೆ. ಆದರೆ ಅದನ್ನು ಅಪರಾಧ ಮತ್ತು ಶಿಕ್ಷೆಗೆ ಸಂಬಂಧಿಸಿದ ಕಾನೂನು ಎಂದು ವ್ಯಾಖ್ಯಾನಿಸಲಾಗಿದೆ. ಅದರ ಪರವಾಗಿರುವವರು ಮತ್ತು ಹಾಗಿಲ್ಲದವರೂ ಹೀಗೆ ಭಾವಿಸಿ ಅಪವ್ಯಾಖ್ಯಾನ ಮಾಡಿದ್ದಾರೆ.

ಅಪರಾಧ ಮತ್ತು ಶಿಕ್ಷೆಗೆ ಸಂಬಂಧಿಸಿದ ಕಾನೂನಿನ ಪುಸ್ತಕ ಎಂದ ಕೂಡಲೇ ಅಲ್ಲಿ ವಧಾಕಾರರು ಮತ್ತು ಬಲಿಪಶುಗಳು ಎಂಬ ಬೈನರಿಗಳಲ್ಲೇ ದೃಷ್ಟಿಕೋನಗಳು ಹುಟ್ಟಿಕೊಳ್ಳುತ್ತವೆ. ಅಂತಹ ಕಡೆ ಸೆಲಬ್ರೇಷನ್ ಮತ್ತು ಪ್ರತಿಭಟನೆಗಳೆರಡೂ ಇರಲು ಸಾಧ್ಯ. ಆದರೆ ನಮ್ಮ ಸಂವಿಧಾನದ ಮೊದಲ 51 ಆರ್ಟಿಕಲ್‌ಗಳಲ್ಲಿ ಹಾಗಿಲ್ಲ. ಅಲ್ಲಿ ಅಪಾರ ಕರುಣೆ ಇದೆ. ತಾಯ್ತನ ಇದೆ. ಒಳ್ಳೆಯ ಮನುಷ್ಯರ ಕುರಿತ ಹಂಬಲ ಇದೆ. ಬಾಬಾ ಸಾಹೇಬರು ಸಂವಿಧಾನವನ್ನು ರೂಪಿಸಲು ವಿವಿಧ ದೇಶಗಳ ಸಂವಿಧಾನಗಳು ಪ್ರೇರಣೆ ನೀಡಿವೆ ಎಂದು ಹೇಳಿದರೂ ಅವರಿಗೆ ನಿಜವಾದ ಪ್ರೇರಣೆ ಬೌದ್ಧ ಮತ್ತು ಶರಣ ತತ್ವ ಪ್ರಭಾವ ಬೀರಿವೆ. ಜೊತೆಗೆ 20ನೇ ಶತಮಾನದ ಬಹುಪಾಲು ದಾರ್ಶನಿಕರು, ರಾಜಕೀಯ ಹೋರಾಟಗಾರರ ಚಿಂತನೆಗಳೂ ಪ್ರಭಾವಿಸಿವೆ. ಸಂವಿಧಾನದ ಪೀಠಿಕೆ, ಹಕ್ಕುಗಳು, ಕರ್ತವ್ಯಗಳು, ನಿರ್ದೇಶಕ ತತ್ವಗಳ ಭಾಗದಲ್ಲಿ ಪದೇ ಪದೇ ಮನುಷ್ಯನನ್ನು ಒಳ್ಳೆಯವನನ್ನಾಗಿಸುವುದು ಹೇಗೆ ಎಂಬ ಧ್ಯಾನ ಕಾಣುತ್ತದೆೆ. ಆದರೆ ಅದನ್ನು ಅರಿತು, ಆಚರಣೆಗೆ ತರಲು ಬೇಕಾದ ‘ಕ್ರಿಟಿಕಲ್ ಥಿಂಕಿಂಗ್’ ಅನ್ನು ನಮ್ಮ ಶಿಕ್ಷಣದಲ್ಲಿ ತರಲೇಬೇಕಾಗಿದೆ. ಇಲ್ಲದಿದ್ದರೆ ಕುರುವ, ಇರುಳ ರೀತಿಯ ಸಮಾಜಗಳ ಮೈಯ ಮೇಲಿನ ರಕ್ತ ಸಿಕ್ತ ಹಲ್ಲು ಉಗುರುಗಳ ಕುರಿತು ಸಿನೆಮಾ ಮಾಡಿಕೊಂಡು, ಕತೆ, ಕವನ, ನಾಟಕ ಬರೆದುಕೊಂಡೇ ಇರಬೇಕಾದ ದುರಂತಗಳು ನಮ್ಮ ಜೀವನದುದ್ದಕ್ಕೂ ಇರುತ್ತವೆ.

ಮನುಷ್ಯ ಸಮಾಜ ಕಳೆದ ನೂರಿನ್ನೂರು ವರ್ಷಗಳಲ್ಲಿ ಹುಟ್ಟಿ ವಿಕಾಸವಾದುದೇನಲ್ಲ. ಅದಕ್ಕೆ ಬಹುದೀರ್ಘವಾದ ಮೆಮೊರಿಗಳಿವೆ. ಹಲವು ವ್ಯವಸ್ಥೆಗಳು ರೂಪಿಸಿ ಜಾರಿಗೊಳಿಸಿದ್ದ ಕಾನೂನುಗಳನ್ನು ಹೊತ್ತುಕೊಂಡು ನಡೆದ, ನೊಂದ, ಸಂಭ್ರಮಿಸಿದ ನೆನಪುಗಳಿಂದ ಅದು ಅಷ್ಟು ಸುಲಭಕ್ಕೆ ಬಿಡಿಸಿಕೊಳ್ಳಲಾಗದು. ಜೊತೆಗೆ ವರ್ಗ, ವರ್ಣ, ಜಾತಿ, ಲಿಂಗ ಮುಂತಾದ ಪ್ರಮೇಯಗಳ ಮೂಲಕ ಸಂಗ್ರಾಹಕರಾಗಿದ್ದ ಸ್ಥಾಪಿತ ಹಿತಾಸಕ್ತಿಗಳು ವ್ಯವಸ್ಥೆಯನ್ನು ಅಷ್ಟು ಸುಲಭಕ್ಕೆ ದಿಕ್ಕು ಬದಲಿಸಲು ಬಿಡಲಾರರು. ಆದ್ದರಿಂದಲೇ ನಮ್ಮಲ್ಲಿ ಆಧುನಿಕ ಸೆಕ್ಯುಲರ್ ಕಾನೂನುಗಳಿಗೂ ಮನು ಮುಂತಾದವರು ರೂಪಿಸಿದ್ದ ತರತಮವಾದಿ ಕಾನೂನುಗಳಿಗೂ ತೀವ್ರ ಸಂಘರ್ಷ ಕಳೆದ ಎಪ್ಪತ್ತು ವರ್ಷಗಳಿಂದಲೂ ನಡೆಯುತ್ತಿದೆ. ಇದರ ಪ್ರತಿರೂಪದಂತೆ ‘ಜೈ ಭೀಮ್’ ಸಿನೆಮಾ ರೂಪುಗೊಂಡಿದೆ. ಕೆಲವರಿಗೆ ಮಾತ್ರ ಸುಖ ಕಲ್ಪಿಸಿ ಉಳಿದವರನ್ನು ಗುಲಾಮರನ್ನಾಗಿಸಲು ರೂಪುಗೊಂಡಿದ್ದ ಹಳೆಯ ಕಾನೂನುಗಳನ್ನು ಮುರಿದು ಎಸೆಯಲು ಪಶ್ಚಿಮವು ಕಲೆ, ಸಾಹಿತ್ಯ, ಸಂಗೀತ, ನಾಟಕ, ವಿಜ್ಞಾನ, ತತ್ವಶಾಸ್ತ್ರ, ಚಳವಳಿ ಮುಂತಾದವುಗಳ ಮೂಲಕ ಕನಿಷ್ಠ 300 ವರ್ಷಗಳ ಕಾಲ ಪ್ರಯತ್ನ ಮಾಡಿತ್ತು. ಇಷ್ಟಾದರೂ ಅಲ್ಲಿ ಹಿಟ್ಲರ್, ಮುಸ್ಸೋಲಿನಿಗಳು ಹುಟ್ಟಿದರು. ಮನುಷ್ಯ ಜಗತ್ತಿನ ಭೀಕರವಾದ ಕೇಡಿನ ಮೊಟ್ಟೆಗಳು ಮರಿಹಾಕಿದ್ದವು. ಅಲ್ಲಿ ಹುಟ್ಟಿದ ಕೇಡುಗಳಿಂದ ಗಾಯಗೊಂಡ ಜಗತ್ತು ಮನುಷ್ಯರು ಒಳ್ಳೆಯವರಾಗಲೇಬೇಕೆಂದು ತೀವ್ರವಾಗಿ ಆಶಿಸಲಾರಂಭಿಸಿತು.

ಪಶ್ಚಿಮದಲ್ಲಿ ಕಳೆದ ಶತಮಾನದ ಉತ್ತರಾರ್ಧ ಭಾಗದ ಧ್ಯಾನ ಈ ಕುರಿತೇ ಆಗಿತ್ತು. ಆಗ ವಿಶ್ವಸ್ಥ ಪ್ರಜ್ಞೆಯ ಮನುಷ್ಯ ಪಾತ್ರಗಳುಳ್ಳ ಸಿನೆಮಾಗಳು ಸಾಲು ಸಾಲು ಬಂದವು. ರಾಷ್ಟ್ರೀಯತೆಗಳು ಹುಟ್ಟುವುದೇ ‘ಯೂನಿಕ್‌ನೆಸ್’ ಎಂಬ ತುಸು ಉಗ್ರಗೊಂಡ ಪ್ರಜ್ಞೆಯಲ್ಲಿ. ಯೂನಿವರ್ಸಲ್ ಪ್ರಜ್ಞೆಯು ಯುರೋಪಿನಲ್ಲಿ ವಿಶಿಷ್ಟ ಎಂಬ ಪ್ರಜ್ಞೆಯನ್ನು ತುಸು ಹಂಗಿಸಿತು. ಆದರೆ ವಿಶಿಷ್ಟತೆಯ ಮೂಲಕವೂ ವಿಶ್ವಾತ್ಮಕವಾಗಲು ಸಾಧ್ಯ ಎಂದು ಮಜೀದ್ ಮಜೀದಿ, ಸತ್ಯಜಿತ್ ರೆ, ಕುರಸೋವಾ, ಕಿಮ್ ಕಿ ಡುಕ್ ಮುಂತಾದವರು ತೋರಿಸಲಾರಂಭಿಸಿದರು. ವಿಶಿಷ್ಟ ಪ್ರತಿಭೆಗಳ ಎದುರು ಸ್ಟಿಲ್‌ಬರ್ಗ್ ರೀತಿಯ ವಿಶ್ವಾತ್ಮಕ ಪ್ರತಿಭೆಗಳು ಮಂಕಾಗತೊಡಗಿದವು. ಹೊಸ ತಲೆಮಾರಿನ ಕೆಲವು ಇತಿಹಾಸಕಾರರು, ಸಮಾಜವಿಜ್ಞಾನಿಗಳು ಹೇಳುತ್ತಿರುವ ಮಾತು; ಅತ್ಯುತ್ತಮ ವಿಶಿಷ್ಟ ಪ್ರಜ್ಞೆಯ ಒಳ್ಳೆಯ ಮನುಷ್ಯರು ನಿಸ್ಸಂದೇಹವಾಗಿ ಉತ್ತಮ ವಿಶ್ವ ಪ್ರಜ್ಞೆಯ ಪ್ರಜೆಗಳೂ ಆಗಿರುತ್ತಾರೆ ಎಂಬುದಾಗಿದೆ. ಈ ನಿಟ್ಟಿನಲ್ಲಿ ಹಲವು ಕಲಾವಿದರು ಕೆಲಸ ಮಾಡುತ್ತಿದ್ದಾರೆ. ಕಲೆ ಎಂಬುದು ವಿಶಿಷ್ಟವಾಗದೆ ವಿಶ್ವಾತ್ಮಕವಾದರೆ ಅದರ ಬಾಳಿಕೆಯ ಗುಣ ಅಲ್ಪಕಾಲದ್ದಾಗಿರುತ್ತದೆ, ಬೇಗ ಬುರ್ನಾಸಾಗುತ್ತದೆ. ‘ಜೈ ಭೀಮ್’ ಸಿನೆಮಾ ಈ ರೀತಿಯ ವಿಶಿಷ್ಟತೆಯುಳ್ಳ ಸಿನೆಮಾ. ಆದರೆ, ವಿಶ್ವಾತ್ಮಕ ಪ್ರಜ್ಞೆಗೆ ಏರಲು ಬೇಕಾದ ಶಕ್ತಿ ಅದಕ್ಕೆ ಇದೆ. ಯಾಕೆಂದರೆ ಕೆಂಪರಾಜ ಮತ್ತು ಸಣ್ಣಮ್ಮ ಎಲ್ಲ ಸಂಸ್ಕೃತಿಗಳಲ್ಲೂ ಇರುವ ಪಾತ್ರಗಳು. ಕೆಂಪರಾಜನಿಗಿಂತ ಪೊಲೀಸರ ಕಾಲಿನಡಿ ಸಿಕ್ಕಿ ಬೀದಿಯಲ್ಲೇ ಉಸಿರು ನಿಲ್ಲಿಸಿದ ಜಾರ್ಜ್ ಫ್ಲಾಯ್ಡಾ ಯಾವ ವಿಧದಲ್ಲಿ ಅದೃಷ್ಟವಂತ?

Writer - ನೆಲ್ಲುಕುಂಟೆ ವೆಂಕಟೇಶ್

contributor

Editor - ನೆಲ್ಲುಕುಂಟೆ ವೆಂಕಟೇಶ್

contributor

Similar News