×
Ad

ಸಿಬಿಐ, ಇಡಿ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಟಿಎಂಸಿ

Update: 2021-11-18 10:25 IST

ಹೊಸದಿಲ್ಲಿ: ಸೆಂಟ್ರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಶನ್ (ಸಿಬಿಐ) ಮತ್ತು ಕಾನೂನು ಜಾರಿ ನಿರ್ದೇಶನಾಲಯ (ಇಡಿ) ಮುಖ್ಯಸ್ಥರ ಹುದ್ದೆಗಳ ಅಧಿಕಾರಾವಧಿಯನ್ನು ವಿಸ್ತರಿಸುವ ಸಂಬಂಧ ಕೇಂದ್ರ ಸರ್ಕಾರ ಆಧ್ಯಾದೇಶ ಹೊರಡಿಸಿರುವ ಕ್ರಮಬದ್ಧತೆಯನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹೂವಾ ಮೊಯಿತ್ರಾ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರದ ಈ ಕ್ರಮ ತನಿಖಾ ಸಂಸ್ಥೆಗಳ ನಿಷ್ಪಕ್ಷಪಾತ ತತ್ವದ ಮೇಲೆ ನಡೆದ ದಾಳಿ ಎಂದು ಅವರು ಪ್ರತಿಪಾದಿಸಿದ್ದಾರೆ.

ಎರಡೂ ಏಜೆನ್ಸಿಗಳ ಮುಖ್ಯಸ್ಥರ ಅಧಿಕಾರಾವಧಿ ಎರಡು ವರ್ಷವಾಗಿದ್ದು, ಇದನ್ನು ಈಗ ಐದು ವರ್ಷಗಳ ವರೆಗೆ ವಿಸ್ತರಿಸಬಹುದಾಗಿದೆ. ಎರಡು ವರ್ಷಗಳ ಅಧಿಕಾರಾವಧಿ ಮುಗಿದ ಬಳಿಕ ಒಂದು ವರ್ಷ ಅವಧಿಗೆ ಸೀಮಿತವಾದಂತೆ ಮೂರು ಬಾರಿ ಅಧಿಕಾರಾವಧಿ ವಿಸ್ತರಿಸಬಹುದು. ಇದಕ್ಕೂ ಮುನ್ನ ಗುರುವಾರ ನಿವೃತ್ತರಾಗಬೇಕಿದ್ದ ಇ.ಡಿ. ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ.

"ಕೇಂದ್ರ ಸರ್ಕಾರದ ಅಧ್ಯಾದೇಶಗಳು ಸಿಬಿಐ ಮತ್ತು ಇಡಿಯ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತತೆ ಮೇಲೆ ನಡೆಸಿದ ದಾಳಿ" ಎಂದು ಅವರು ಬಣ್ಣಿಸಿದ್ದಾರೆ. ಸರ್ಕಾರಕ್ಕೆ ತನ್ನ ಆದ್ಯತೆಗೆ ಅನುಸಾರವಾಗಿ ಕಾರ್ಯ ನಿರ್ವಹಿಸುವ ನಿರ್ದೇಶಕರನ್ನು ಆಯ್ಕೆ ಮಾಡಲು ಇದು ಅವಕಾಶ ಮಾಡಿಕೊಡುತ್ತದೆ" ಎಂದು ಅವರು ಪ್ರತಿಪಾದಿಸಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಹೆಸರಿನಲ್ಲಿ ಅಧಿಕಾರಾವಧಿ ವಿಸ್ತರಿಸುವ ಕೇಂದ್ರದ ಕ್ರಮ, ಅಧಿಕಾರದಲ್ಲಿರುವ ಇಡಿ ಹಾಗೂ ಸಿಬಿಐ ನಿರ್ದೇಶಕರನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅವಕಾಶ ಮಾಡಿಕೊಡುತ್ತದೆ ಎಂದೂ ಅವರು ವಾದಿಸಿದ್ದಾರೆ. ಈ ಅಧ್ಯಾದೇಶವು, ಸಂವಿಧಾನದ ಸಮಾನತೆಯ ಹಕ್ಕು ಮತ್ತು ಜೀವನದ ಹಕ್ಕುಗಳಲ್ಲಿ ಖಾತರಿಪಡಿಸಿರುವ ನ್ಯಾಯಸಮ್ಮತ ತನಿಖೆ ಮತ್ತು ನ್ಯಾಯಸಮ್ಮತ ವಿಚಾರಣೆಯ ಸ್ಪಷ್ಟ ಉಲ್ಲಂಘನೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News