ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಎಲ್ಲಿದ್ದಾರೆ? ಎಂದು ಕೇಳಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ,ನ.18: ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮಬೀರ್ ಸಿಂಗ್ ಅವರಿಗೆ ಹಫ್ತಾ ವಸೂಲಿ ಪ್ರಕರಣದಲ್ಲಿ ಬಂಧನದ ವಿರುದ್ಧ ರಕ್ಷಣೆ ನೀಡಲು ಗುರುವಾರ ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು,ನೀವು ಎಲ್ಲಿದ್ದೀರಿ ಎನ್ನುವುದನ್ನು ಮೊದಲು ಬಹಿರಂಗಗೊಳಿಸಿ ಎಂದು ತಾಕೀತು ಮಾಡಿತು.
ಸಿಂಗ್ ಕನಿಷ್ಠ ನಾಲ್ಕು ಹಫ್ತಾ ವಸೂಲಿ ಪ್ರಕರಣಗಳನ್ನು ಎದುರಿಸುತ್ತಿದ್ದು,ದೇಶ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸಿಂಗ್ ಎಲ್ಲಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯವು ಅವರ ಪರ ವಕೀಲರನ್ನು ಪ್ರಶ್ನಿಸಿತು.
‘ನೀವು ಎಲ್ಲಿದ್ದೀರಿ? ಈ ದೇಶದಲ್ಲಿ ಅಥವಾ ವಿದೇಶದಲ್ಲಿ? ಯಾವುದಾದರೂ ರಾಜ್ಯದಲ್ಲಿ? ಎಲ್ಲಿದ್ದೀರಿ ನೀವು? ಉಳಿದ ವಿಷಯವನ್ನು ನಾವು ನಂತರ ನೋಡುತ್ತೇವೆ. ನೀವು ಎಲ್ಲಿದ್ದೀರಿ ಎನ್ನುವುದು ಮೊದಲು ನಮಗೆ ಗೊತ್ತಾಗಬೇಕಿದೆ ’ಎಂದು ನ್ಯಾ.ಎಸ್.ಕೆ.ಕೌಲ್ ನೇತೃತ್ವದ ಪೀಠವು ಸಿಂಗ್ ಅವರನ್ನು ಗುರಿಯಾಗಿಸಿಕೊಂಡು ಹೇಳಿತು.
ತನ್ನ ಕಕ್ಷಿದಾರರಿಗೆ ‘ಉಸಿರಾಡಿಸಲು ಅವಕಾಶ’ ನೀಡಿದರೆ ಅವರು ‘ಬಿಲದಿಂದ’ ಹೊರಬರುತ್ತಾರೆ ಎಂದು ವಾದಿಸಿದ ಸಿಂಗ್ ಪರ ವಕೀಲರನ್ನು ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು, ‘ವ್ಯವಸ್ಥೆಯಲ್ಲಿ ವಿಶ್ವಾಸದ ಕೊರತೆಯತ್ತ ನೋಡಿ. ಅವರು ಪೊಲೀಸ್ ಆಯುಕ್ತರಾಗಿದ್ದವರು,ಆದರೆ ನಾವು ಅವರನ್ನು ಭಿನ್ನರಾಗಿ ಪರಿಗಣಿಸುವುದಿಲ್ಲ. ಅವರು ರಕ್ಷಣೆಯನ್ನು ಕೋರುತ್ತಿದ್ದಾರೆ. ನ್ಯಾಯಾಲಯಗಳು ರಕ್ಷಣೆ ನೀಡಿದರೆ ಮಾತ್ರ ಅವರು ಭಾರತಕ್ಕೆ ಬರುತ್ತಾರೆ ಎಂದು ನೀವು ಹೇಳುತ್ತಿದ್ದೀರಾ ’ ಎಂದು ಪ್ರಶ್ನಿಸಿತು.
ರಕ್ಷಣೆಯನ್ನು ಕೋರಿ ಪವರ್ ಆಫ್ ಅಟಾರ್ನಿ ಮೂಲಕ ಅರ್ಜಿಯನ್ನು ಸಲ್ಲಿಸಿದ್ದನ್ನು ಆಕ್ಷೇಪಸಿದ ಪೀಠವು,ನೀವು ರಕ್ಷಣೆ ಆದೇಶವನ್ನು ಕೋರಿದ್ದೀರಿ,ನೀವು ಎಲ್ಲಿದ್ದೀರಿ ಎನ್ನುವುದು ಯಾರಿಗೂ ತಿಳಿದಿಲ್ಲ. ನೀವು ವಿದೇಶದಲ್ಲಿ ಕುಳಿತುಕೊಂಡು ಕಾನೂನು ನೆರವಿಗಾಗಿ ಪವರ್ ಆಫ್ ಅಟಾರ್ನಿ ಮೂಲಕ ಅರ್ಜಿ ಸಲ್ಲಿಸಿದರೆ ಏನಾಗುತ್ತದೆ? ನ್ಯಾಯಾಲಯವು ನಿಮ್ಮ ಪರವಾಗಿ ಆದೇಶ ಹೊರಡಿಸಿದರೆ ನೀವು ಭಾರತಕ್ಕೆ ಬರುತ್ತೀರಿ. ನಿಮ್ಮ ಮನಸ್ಸಿನಲ್ಲಿ ಏನಿದೆ ಎನ್ನುವದು ನಮಗೆ ಗೊತ್ತಿಲ್ಲ. ನೀವು ಎಲ್ಲಿದ್ದೀರಿ ಎನ್ನುವುದು ತಿಳಿಯದೆ ನಿಮಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.
ಮುಂದಿನ ವಿಚಾರಣೆ ನ.22ರಂದು ನಡೆಯಲಿದೆ.
ಸಿಂಗ್ ಅವರನ್ನು ‘ತಲೆಮರೆಸಿಕೊಂಡ ಆರೋಪಿ’ಎಂದು ಘೋಷಿಸಬಹುದು ಎಂದು ಮುಂಬೈ ನ್ಯಾಯಾಲಯವೊಂದು ಬುಧವಾರ ಹೇಳಿತ್ತು.