ರೈತರು ಬರಿಗೈಯಲ್ಲಿ ಹಿಂತಿರುಗುವುದಿಲ್ಲ ಎಂಬುದನ್ನು ಕೇಂದ್ರ ಸರಕಾರ ಅರ್ಥಮಾಡಿಕೊಳ್ಳಬೇಕು: ರಾಜ್ಯಪಾಲ ಮಲಿಕ್

Update: 2021-11-18 16:03 GMT
Photo: twitter

ಹೊಸದಿಲ್ಲಿ: ಎಷ್ಟೇ ಪರಿಣಾಮ ಎದುರಿಸಿದರೂ ರೈತರ ಪರವಾಗಿ ನಾನು ಮಾತನಾಡುತ್ತೇನೆ ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

"ರೈತರ ಪ್ರತಿಭಟನೆಯಿಂದಾಗಿ ಉತ್ತರ ಪ್ರದೇಶ ಹಾಗೂ  ಇತರ ರಾಜ್ಯಗಳಲ್ಲಿ ಬಿಜೆಪಿ ಭಾರೀ ನಷ್ಟವನ್ನು ಅನುಭವಿಸಿದೆ. ಸರಕಾರವು ರೈತರ ಮಾತನ್ನು ಕೇಳಬೇಕು. ರೈತರು ಬರಿಗೈಯಲ್ಲಿ ಹಿಂತಿರುಗುವುದಿಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು" ಎಂದು ಮಲಿಕ್  ಎನ್‌ಡಿಟಿವಿಗೆ ವಿಶೇಷ ಸಂದರ್ಶನದಲ್ಲಿ ಹೇಳಿದರು.

ರಾಜ್ಯಪಾಲರ ಹುದ್ದೆಗೆ ನೇಮಿಸಿದಾಗಲೂ ಮೋದಿ ಸರಕಾರದ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಟೀಕಿಸುವವರನ್ನು ಉಲ್ಲೇಖಿಸಿದ ಅವರು "ಯಾರ ತಂದೆಯೂ ನನ್ನನ್ನು ರಾಜ್ಯಪಾಲರನ್ನಾಗಿ ಮಾಡಿಲ್ಲ.  ಪ್ರಧಾನಿ ನನ್ನನ್ನು ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ. ಪ್ರಧಾನಿ ಮೋದಿ ಕೇಳಿದರೆ ತಕ್ಷಣವೇ ರಾಜೀನಾಮೆ ನೀಡುತ್ತೇನೆ'' ಎಂದು ಅವರು ಹೇಳಿದರು.

ಯಾವುದೇ ಪರಿಣಾಮ ಎದುರಾದರೂ ರೈತರ ಪರ ಧ್ವನಿ ಎತ್ತುತ್ತಲೇ ಇರುತ್ತೇನೆ ಎಂದು ಒತ್ತಿ ಹೇಳಿದ ಅವರು, "ನಾನು ರೈತ ಕುಟುಂಬದಿಂದ ಬಂದವನು. ನನಗೆ ರಾಜ್ಯಪಾಲರ ಹುದ್ದೆಯ ಮೇಲೆ  ದುರಾಸೆ ಇಲ್ಲ, ನಾನು ಮೊದಲ ಬಾರಿಗೆ ರಾಜ್ಯಪಾಲನಾದಾಗ ನಾನು ಈ ಹುದ್ದೆಯಲ್ಲಿ ಹೆಚ್ಚು ದಿನ ಮುಂದುವರಿಯುವುದಿಲ್ಲ ಎಂದು ಉದ್ದೇಶಪೂರ್ವಕವಾಗಿ ಹೇಳಿದ್ದೆ. ಸಾಂವಿಧಾನಿಕ ಹುದ್ದೆಯು ನನ್ನನ್ನು ರಾಜಕೀಯದ ಬಗ್ಗೆ ಅಥವಾ ಸರಕಾರವನ್ನು ಟೀಕಿಸುವುದನ್ನು ತಡೆಯುವುದಿಲ್ಲ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News