ಮಹಾ ದುರಂತದ ಅಂಚಿನಲ್ಲಿ ಅಫ್ಘಾನಿಸ್ತಾನ: ವಿಶ್ವಸಂಸ್ಥೆ ಪ್ರತಿನಿಧಿ ಕಳವಳ‌

Update: 2021-11-18 16:42 GMT

ವಿಶ್ವಸಂಸ್ಥೆ, ನ.18: ಅಫ್ಘಾನಿಸ್ತಾನವು ಮಾನವೀಯ ದುರಂತದ ಅಂಚಿನಲ್ಲಿದ್ದು , ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅನಾಥಪ್ರಜ್ಞೆಯಲ್ಲಿರುವ ದೇಶದ ಜನರಿಗೆ ಆರ್ಥಿಕ ನೆರವು ಒದಗಿಸುವ ವಿಧಾನಗಳನ್ನು ಅಂತರಾಷ್ಟ್ರೀಯ ಸಮುದಾಯ ರೂಪಿಸಬೇಕು ಎಂದು ಅಫ್ಘಾನಿಸ್ತಾನಕ್ಕೆ ವಿಶ್ವಸಂಸ್ಥೆಯ ಪ್ರತಿನಿಧಿ ಡೆಬೋರ ಲಿಯೋನ್ಸ್ ಆಗ್ರಹಿಸಿದ್ದಾರೆ.

ಅಫ್ಘಾನ್‌ನಲ್ಲಿ ಆಹಾರದ ಕೊರತೆ ತೀವ್ರವಾಗಿದ್ದು ದೇಶದ 38 ಮಿಲಿಯನ್ ಜನಸಂಖ್ಯೆಯ 60%ದಷ್ಟು ಜನತೆಗೆ ಆಹಾರದ ಸಮಸ್ಯೆ ಎದುರಾಗಿದೆ. ಇದೀಗ ಚಳಿಗಾಲ ಆರಂಭವಾಗಿದ್ದು ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಇದು ಅಫ್ಘಾನ್ ಜನರಿಂದ ಮುಖ ತಿರುಗಿಸುವ ಸಮಯವಲ್ಲ ಎಂದವರು ಎಚ್ಚರಿಸಿದ್ದಾರೆ.

ಈ ಸಮಯದಲ್ಲಿ ಅಫ್ಘಾನ್ ಜನರನ್ನು ಕೈಬಿಟ್ಟರೆ ಅದೊಂದು ಚಾರಿತ್ರಿಕ ಪ್ರಮಾದವಾಗಲಿದೆ- ಈ ಹಿಂದೆ ದುರಂತ ಪರಿಣಾಮಕ್ಕೆ ಕಾರಣವಾಗಿದ್ದ ಪ್ರಮಾದ ಮರುಕಳಿಸಲಿದೆ ಎಂದು ವಿಶ್ವಸಂಸ್ಥೆಯಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಲಿಯೋನ್ಸ್ ಹೇಳಿದ್ದಾರೆ.

ಮಾನವೀಯ ದುರಂತವನ್ನು ತಡೆಯಬಹುದಾಗಿದೆ. ಯಾಕೆಂದರೆ ಆ ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿಗೆ ಪ್ರಮುಖ ಕಾರಣವೆಂದರೆ ತಾಲಿಬಾನ್ ವಿರುದ್ಧ ವಿಧಿಸಿರುವ ಆರ್ಥಿಕ ದಿಗ್ಬಂಧನ. ಆರ್ಥಿಕ ದಿಗ್ಬಂಧನವು ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದ್ದು ಆರ್ಥಿಕತೆಯ ಎಲ್ಲಾ ಕ್ಷೇತ್ರದ ಮೇಲೆಯೂ ಪರಿಣಾಮ ಬೀರಿದೆ. ಈಗ ಅಂತರಾಷ್ಟ್ರೀಯ ಸಮುದಾಯ ಆರ್ಥಿಕ ನೆರವು ಒದಗಿಸಿದರೆ ಅದು ತಾಲಿಬಾನ್‌ಗಳ ಕೈತಲುಪದಂತೆ ವಿಶ್ವಸಂಸ್ಥೆ ಎಲ್ಲಾ ಪ್ರಯತ್ನ ನಡೆಸಲಿದೆ ಎಂದವರು ಹೇಳಿದರು.

ತಾಲಿಬಾನ್ ಅಫ್ಘಾನ್‌ನ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ಆ ದೇಶದ ಜಿಡಿಪಿ ಸುಮಾರು 40%ದಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ. ಅಫ್ಘಾನಿಸ್ತಾನ ತಾಲಿಬಾನ್ ವಶಕ್ಕೆ ಬರುತ್ತಿದ್ದಂತೆಯೇ ಆ ದೇಶಕ್ಕೆ ಬಿಡುಗಡೆಯಾಗಿದ್ದ 450 ಮಿಲಿಯನ್ ಡಾಲರ್ ನಿಧಿಯನ್ನು ಐಎಂಎಫ್ ಹಲವು ಸಮಯದವರೆಗೆ ತಡೆಹಿಡಿದಿತ್ತು. ಜೊತೆಗೆ, ಅಮೆರಿಕ ಸಹಿತ ವಿದೇಶದ ಬ್ಯಾಂಕ್‌ಗಳಲ್ಲಿ  ಜಮೆಯಾಗಿರುವ ಅಫ್ಘಾನ್ ಸೆಂಟ್ರಲ್ ಬ್ಯಾಂಕ್ ನ 9 ಬಿಲಿಯನ್ ಡಾಲರ್ ಮೀಸಲು ನಿಧಿಯನ್ನು ಸ್ಥಂಭನಗೊಳಿಸಲಾಗಿದೆ.

ಸ್ಥಂಭನಗೊಳಿಸಿರುವ ಹಣ ಬಿಡುಗಡೆಗೊಳಿಸಿದರೆ ಅಫ್ಘಾನ್ ಈಗ ಎದುರಿಸುತ್ತಿರುವ ಬಿಕ್ಕಟ್ಟು ತುಸು ಕಡಿಮೆಯಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಲಿಯೋನ್ಸ್ ‘ ಅಂತರಾಷ್ಟ್ರೀಯ ದಾನಿಗಳು ಮಾನವೀಯ ನೆರವಿನ ಉಪಕ್ರಮಗಳಿಗೆ ಘೋಷಿಸಿರುವ ದೇಣಿಗೆಯನ್ನು ನಾವು ಎದುರು ನೋಡುತ್ತಿದ್ದೇವೆ. ಈ ಹಣವನ್ನು ಸೂಕ್ತವಾಗಿ ವಿನಿಯೋಗಿಸುವ ವ್ಯವಸ್ಥೆ ರೂಪಿಸುವ ಬಗ್ಗೆ ಆದ್ಯತೆ ನೀಡುತ್ತೇವೆ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News