ಅರುಣಾಚಲ ಪ್ರದೇಶ: ಐಎಎಫ್ ಹೆಲಿಕಾಪ್ಟರ್ ಹಠಾತ್ ಭೂಸ್ಪರ್ಶ
Update: 2021-11-18 23:43 IST
ಹೊಸದಿಲ್ಲಿ, ನ. 17: ಭಾರತೀಯ ವಾಯು ಪಡೆಯ ಎಂಐ-17 ಹೆಲಿಕಾಪ್ಟರ್ ಪೂರ್ವ ಅರುಣಾಚಲ ಪ್ರದೇಶದಲ್ಲಿ ಹಠಾತ್ ಭೂಸ್ಪರ್ಶ ಮಾಡಿದೆ. ಈ ಹೆಲಿಕಾಪ್ಟರ್‌ನಲ್ಲಿ ಇಬ್ಬರು ಪೈಲೆಟ್‌ಗಳು ಹಾಗೂ ಮೂವರು ಸಿಬ್ಬಂದಿ ಇದ್ದರು. ಎಲ್ಲರೂ ಸುರಕ್ಷಿತರಾಗಿದ್ದಾರೆ. ಘಟನೆ ನಡೆಯುವ ಸಂದರ್ಭ ಹೆಲಿಕಾಪ್ಟರ್ ಈ ಪ್ರದೇಶದಲ್ಲಿ ನಿರ್ವಹಣಾ ಸರಕುಗಳ ಸಾಗಾಟ ಮಾಡುತ್ತಿತ್ತು.
ಘಟನೆಯ ಕಾರಣವನ್ನು ಸ್ಪಷ್ಟವಾಗಿ ತಿಳಿಯಲು ‘ಕೋರ್ಟ್ ಆಫ್ ಎಂಕ್ವೆಯರಿ’ ತನಿಖೆಗೆ ಆದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ. ಸೆಪ್ಟಂಬರ್‌ನಲ್ಲಿ ಸೇನಾ ಹೆಲಿಕಾಪ್ಟರ್ ಜಮ್ಮು ಹಾಗೂ ಕಾಶ್ಮೀರದ ಉಧಮ್‌ಪುರ ಜಿಲ್ಲೆಯ ಪಾಟ್ನಿಟಾಪ್ ಪ್ರವಾಸಿ ಧಾಮದ ಸಮೀಪದ ಶಿವ ಘರ್ಹ್ ಧಾರ್ ಪ್ರದೇಶದಲ್ಲಿ ಹಠಾತ್ ಭೂಸ್ಪರ್ಶ ಮಾಡಿತ್ತು. ಈ ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದರು. ಆಗಸ್ಟ್ 3ರಂದು ಪಠಾಣ್‌ಕೋಟ್‌ನ ಸಮೀಪದ ರಂಜಿತ್ ಸಾಗರ್ ಅಣೆಕಟ್ಟಿನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿರುವುದರಿಂದ ಇಬ್ಬರು ಪೈಲೆಟ್‌ಗಳು ಸಾವನ್ನಪ್ಪಿದ್ದರು.