‘ಸ್ಟೀವ್’ ಹೆಸರಿಗಾಗಿ ಚೇತೇಶ್ವರ್ ಪೂಜಾರರ ಕ್ಷಮೆ ಯಾಚಿಸಿದ ಜಾಕ್ ಬ್ರೂಕ್ಸ್

Update: 2021-11-18 18:50 GMT
photo:twitter

ಲಂಡನ್, ನ. 18: ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಆಟಗಾರ ಚೇತೇಶ್ವರ್ ಪೂಜಾರ ಇಂಗ್ಲೆಂಡ್‌ನಯಾರ್ಕ್‌ಶೈರ್‌ನಲ್ಲಿ ಕೌಂಟಿ ಪಂದ್ಯಗಳನ್ನು ಆಡುತ್ತಿದ್ದಾಗ ಅವರಿಗೆ ‘ಸ್ಟೀವ್’ ಎಂಬ ಅಡ್ಡ ಹೆಸರನ್ನು ಇಟ್ಟಿರುವುದಕ್ಕಾಗಿ ಸಾಮರ್‌ಸೆಟ್ ಕೌಂಟಿ ತಂಡದ ವೇಗಿ ಜಾಕ್ ಬ್ರೂಕ್ಸ್ ಗುರುವಾರ ಕ್ಷಮೆ ಯಾಚಿಸಿದ್ದಾರೆ.

ಅದೇ ವೇಳೆ, 2012ರಲ್ಲಿ ಮಾಡಿರುವ ಜನಾಂಗೀಯವಾದಿ ಟ್ವೀಟ್‌ಗಳಿಗಾಗಿಯೂ ಅವರು ಕ್ಷಮೆ ಕೋರಿದ್ದಾರೆ.

ಯಾರ್ಕ್‌ಶೈರ್ ಕೌಂಟಿಯಲ್ಲಿ ಜನಾಂಗೀಯ ತಾರತಮ್ಯ ಸಾಮಾನ್ಯವೆಂಬಂತೆ ಬೇರುಬಿಟ್ಟಿದೆ ಎಂಬುದಾಗಿ ಇಂಗ್ಲೆಂಡ್ ಕ್ರಿಕೆಟಿಗ ಅಝೀಮ್ ರಫೀಕ್ ಆರೋಪಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಅವರ ಆರೋಪವು ಇಂಗ್ಲಿಷ್ ಕ್ರಿಕೆಟ್ ವಲಯದಲ್ಲಿ ಭಾರೀ ವಿವಾದ ಸೃಷ್ಟಿಸಿದೆ. ‘‘ಉಚ್ಚರಿಸಲು ಕಷ್ಟವಾದ ಹೆಸರುಗಳನ್ನು ಹೊಂದಿದವರಿಗೆ ಡ್ರೆಸಿಂಗ್ ಕೋಣೆಯಲ್ಲಿ ಅಡ್ಡ ಹೆಸರುಗಳನ್ನು ಇಡುವುದು ಸಾಮಾನ್ಯವಾಗಿತ್ತು. ಕೆಲವರಿಗೆ ‘ಸ್ಟೀವ್’ ಎಂಬ ಹೆಸರಿಡಲಾಗಿತ್ತು. ಜನಾಂಗ ಅಥವಾ ವಂಶವನ್ನು ಪರಿಗಣಿಸದೆ ಅವರನ್ನು ಆ ಹೆಸರಿನಿಂದ ಕರೆಯಲಾಗುತ್ತಿತ್ತು’’ ಎಂಬುದಾಗಿ ಸೋಮರ್‌ಸೆಟ್ ಕ್ಲಬ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ಹೇಳಿಕೆಯಲ್ಲಿ ಬ್ರೂಕ್ಸ್ ತಿಳಿಸಿದ್ದಾರೆ.

‘‘ಈ ಹಿನ್ನೆಲೆಯಲ್ಲಿ ಆ ಹೆಸರನ್ನು ನಾನು ಬಳಸಿರುವುದು ಹೌದು. ಅದು ಅಗೌರವಯುತ ಹಾಗೂ ತಪ್ಪು ಎನ್ನುವುದನ್ನು ನಾನು ಈಗ ಒಪ್ಪುತ್ತೇನೆ. ನಾನು ಚೇತೇಶ್ವರ್ ಪೂಜಾರರನ್ನು ಸಂಪರ್ಕಿಸಿ ಅವರ ಕ್ಷಮೆ ಕೋರಿದ್ದೇನೆ. ಆ ಸಮಯದಲ್ಲಿ ಅದು ಜನಾಂಗೀಯವಾದಿ ನಡವಳಿಕೆ ಎನ್ನುವುದು ನನಗೆ ತಿಳಿದಿರಲಿಲ್ಲ. ಆದರೆ, ಅದು ಸ್ವೀಕಾರಾರ್ಹವಲ್ಲ ಎನ್ನುವುದು ಈಗ ನನಗೆ ಅರಿವಾಗಿದೆ’’ ಎಂದು ಅವರು ಹೇಳಿದ್ದಾರೆ. ಪೂಜಾರ 2015 ಮತ್ತು 2018ರ ನಡುವಿನ ಅವಧಿಯಲ್ಲಿ ಕೌಂಟಿ ಕ್ರಿಕೆಟ್ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News