ಆಂಧ್ರಕ್ಕೆ ಪ್ರವಾಹ ಭೀತಿ, ರಾಜ್ಯದಲ್ಲೂ ವ್ಯಾಪಕ ಮಳೆ
ಹೈದರಾಬಾದ್, ನ.19: ಆಂಧ್ರ ಪ್ರದೇಶದಲ್ಲಿ ಶುಕ್ರವಾರ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಕಡಪ ಮತ್ತು ಅನಂತಪುರ ಜಿಲ್ಲೆಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತ ದಕ್ಷಿಣ ಚೆನ್ನೈ ಕರಾವಳಿಯನ್ನು ದಾಟಿದ್ದು, ಅನಂತಪುರ- ಬೆಂಗಳೂರು ಪ್ರದೇಶದತ್ತ ಚಲಿಸುತ್ತಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
"ಅನಂತಪುರ ಮತ್ತು ಕಡಪ ಜಿಲ್ಲೆಯಲ್ಲಿ ಮಳೆ ಇದೀಗ ಗಣನೀಯವಾಗಿ ಹೆಚ್ಚಿದ್ದು, ಶುಕ್ರವಾರದ ವೇಳೆಗೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಗುರುವಾರ ತಡರಾತ್ರಿ ಮುನ್ನೆಚ್ಚರಿಕೆ ನೀಡಿದೆ. ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಬಲವಾದ ಗಾಳಿ ಬೀಸಲಿದೆ" ಎಂದು ಹೇಳಿದೆ.
"ಬಂಗಾಳ ಕೊಲ್ಲಿಯ ನೈರುತ್ಯ ದಿಕ್ಕಿನಲ್ಲಿ ಸಂಭವಿಸಿದ ವಾಯುಭಾರತ ಕುಸಿತ ವಾಯವ್ಯ ದಿಕ್ಕಿನಲ್ಲಿ ಚಲಿಸಿ ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರ ಪ್ರದೇಶದಲ್ಲಿ ಪುದುಚೇರಿ ಮತ್ತು ಚೆನ್ನೈ ಪ್ರದೇಶವನ್ನು ಮುಂಜಾನೆ 3-4 ಗಂಟೆಯ ವೇಳೆಗೆ ದಾಟಲಿದೆ" ಎಂದು ಟ್ವೀಟ್ ಮಾಡಿದೆ.
ತಮಿಳುನಾಡು, ಪುದುಚೇರಿ, ಕಾರಿಕಲ್ ಮತ್ತು ಆಂಧ್ರ ಪ್ರದೇಶದ ಕರಾವಳಿಯಲ್ಲಿ, ರಾಯಲಸೀಮೆ ಹಾಗೂ ಕರ್ನಾಟಕದ ಕೆಲ ಭಾಗಗಳಲ್ಲಿ ಶುಕ್ರವಾರ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಕರ್ನಾಟಕದ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು, ಕೋಲಾರ, ಮಂಡ್ಯ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಬೀಳಲಿದೆ.