×
Ad

ಪಂಜಾಬ್ ಚುನಾವಣೆ ಮೇಲೆ ಪ್ರಭಾವ ಬೀರಬಹುದಾದ ಕೃಷಿ ಕಾನೂನನ್ನು ಗುರುನಾನಕ್ ಜಯಂತಿಯಂದು ರದ್ದುಪಡಿಸಿದ ಪ್ರಧಾನಿ:ವರದಿ

Update: 2021-11-19 11:20 IST

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಹಾಗೂ  ದೇಶಾದ್ಯಂತ ಒಂದು ವರ್ಷಕ್ಕೂ ಹೆಚ್ಚು ಕಾಲ ರೈತರ ತೀವ್ರ ಪ್ರತಿಭಟನೆಗೆ ಕಾರಣವಾಗಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಧಾನಿ ಮೋದಿಯವರ ನಿರ್ಧಾರದ ನಂತರ ವಿಜಯ ಸಾಧಿಸಿರುವ ಪ್ರತಿಭಟನಾ ನಿರತ ರೈತರನ್ನು ಪ್ರತಿಪಕ್ಷಗಳು ಅಭಿನಂದಿಸಿವೆ. ಮುಂಬರುವ ಪಂಜಾಬ್ ಚುನಾವಣೆಯ ಮೇಲೆ ಪ್ರಭಾವ ಬೀರಬಹುದಾದ ಘೋಷಣೆಯನ್ನು ಮಾಡಲು ಪ್ರಧಾನಿಯವರು ಮೊದಲ ಸಿಖ್ ಗುರುಗಳ ಜನ್ಮದಿನವಾದ ಗುರುನಾನಕ್ ಜಯಂತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ  ಎಂದು NDTV ವರದಿ ಮಾಡಿದೆ.

ಪಂಜಾಬ್ ರಾಜ್ಯದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದೆ.

ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಹೆಚ್ಚಿನ ರೈತರು ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶದವರು. ಇತ್ತೀಚೆಗಿನ ಉಪಚುನಾವಣೆಯಲ್ಲಿ ಬಿಜೆಪಿ ಆಡಳಿತಕ್ಕೆ ಹಿನ್ನಡೆಯಾಗಿದ್ದು, ಮುಂದಿನ ವರ್ಷ ಉತ್ತರಪ್ರದೇಶ ಹಾಗೂ  ಪಂಜಾಬ್ ಸೇರಿದಂತೆ ಹಲವು ರಾಜ್ಯಗಳು ವಿಧಾನಸಭೆ ಚುನಾವಣೆಗಳನ್ನು ಎದುರಿಸಲಿರುವುದರಿಂದ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಇದು ಪ್ರೇರೇಪಿಸಿತು ಎಂದು ಹೇಳಲಾಗುತ್ತಿದೆ.

 ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್‌ಪುರಕ್ಕೆ ಹೋಗುವ ರಸ್ತೆ ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅನ್ನು  ಪುನಃ ತೆರೆಯುವುದಾಗಿ ಕೇಂದ್ರವು ಘೋಷಿಸಿದ ಎರಡು ದಿನಗಳ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದು ಹೆಚ್ಚಿನ ಸಂಖ್ಯೆಯ ಸಿಖ್ ಯಾತ್ರಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ರೈತರ 'ತ್ಯಾಗ' ವನ್ನು ಶ್ಲಾಘಿಸಿದರು ಹಾಗೂ ಈ ಕ್ರಮವನ್ನು 'ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆ' ಎಂದು ಕರೆದರು. ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು " ಗುರುನಾನಕ್ ಜಯಂತಿಯ ಸಂದರ್ಭ ಪ್ರತಿಯೊಬ್ಬ ಪಂಜಾಬಿಯ ಬೇಡಿಕೆಗಳನ್ನು ಒಪ್ಪಿಕೊಂಡಿದ್ದಕ್ಕಾಗಿ" ಪ್ರಧಾನಿಗೆ ಧನ್ಯವಾದ ಅರ್ಪಿಸಿದರು.

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಪ್ರತಿಭಟನೆಯ ಸಮಯದಲ್ಲಿ ಸಾವನ್ನಪ್ಪಿದ "700 ಕ್ಕೂ ಹೆಚ್ಚು "ಹುತಾತ್ಮ" ರೈತರು ಯಾವಾಗಲೂ ಸ್ಮರಣೀಯವಾಗಿದ್ದಾರೆ ಎಂದು ಹೇಳಿದರು.

 "ರೈತರು ಮತ್ತು ಕೃಷಿಯನ್ನು ರಕ್ಷಿಸಲು ನನ್ನ ದೇಶದ ರೈತರು ತಮ್ಮ ಪ್ರಾಣವನ್ನು ಹೇಗೆ ಪಣಕ್ಕಿಟ್ಟಿದ್ದಾರೆ ಎಂಬುದನ್ನು ಮುಂಬರುವ ಪೀಳಿಗೆಗಳು ನೆನಪಿಸಿಕೊಳ್ಳುತ್ತವೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News