ಜನಸ್ನೇಹಿ ಸಭಾಂಗಣ ಮುಚ್ಚಬೇಡಿ

Update: 2021-11-19 18:04 GMT

ಮಾನ್ಯರೆ,

ಮೈಸೂರಿನ ರಂಗಾಯಣದ ಆವರಣದಲ್ಲಿ, ಕಲಾಮಂದಿರಕ್ಕೆ ಹೊಂದಿಕೊಂಡಂತಿರುವ ಮನೆ ಅಂಗಳ ಸಭಾಂಗಣ ಮುಚ್ಚಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಕಚೇರಿಯಾಗಿ ಮಾರ್ಪಡಿಸುವ ಸರಕಾರದ ನಿರ್ಧಾರ ಅಕ್ಷಮ್ಯ ಮತ್ತು ಕಲಾಭಂಜಕ, ಸಾಹಿತ್ಯ ವಿರೋಧಿ ಕ್ರಮ. ಮನೆ ಅಂಗಳ ಸಣ್ಣ ಪ್ರಮಾಣದ ಸಭೆಗಳಿಗೆ ಸೂಕ್ತವಾದ ಒಂದು ಅಂಗಳ. ಕಳೆದ ಹಲವು ವರ್ಷಗಳಲ್ಲಿ ಮನೆ ಅಂಗಳ ನೂರಾರು ಸಾಹಿತ್ಯ ಕೃತಿಗಳ ಬಿಡುಗಡೆಗೆ, ನೂರಾರು ಖ್ಯಾತನಾಮರ ಸನ್ಮಾನಕ್ಕೆ, ಹಲವಾರು ಕಲಾವಿದರ ಕಲಾ ಪ್ರದರ್ಶನಕ್ಕೆ ಮತ್ತು ಕೆಲವೇ ಜನರು ಸೇರುವಂತಹ ಚರ್ಚಾಕೂಟಗಳಿಗೆ, ಸಂವಾದಗಳಿಗೆ ಸಾಕ್ಷಿಯಾಗಿದೆ. ಸಣ್ಣ ಪುಟ್ಟ ಸಂಘ ಸಂಸ್ಥೆಗಳಿಗೆ, ಸಂಘಟನೆಗಳಿಗೆ ಕೈಗೆಟುಕುವ ದರದಲ್ಲಿ ಈ ಸಭಾಂಗಣ ಲಭ್ಯವಾಗುತ್ತಿದೆ. ಕಲಾಮಂದಿರದಲ್ಲಿ ಯಾವುದಾದರೂ ಕಾರ್ಯಕ್ರಮ ನಡೆಯುತ್ತಿದ್ದರೆ ಅಲ್ಲಿನ ಸದ್ದು ಈ ಸಭಾಂಗಣದ ಕಾರ್ಯಕ್ರಮಗಳಿಗೆ ಅಡಚಣೆ ಉಂಟುಮಾಡುತ್ತಿತ್ತು ಎಂಬುದರ ಹೊರತಾಗಿ, ಮನೆ ಅಂಗಳ ಒಂದು ಜನಸ್ನೇಹಿ ಸಭಾಂಗಣವಾಗಿದೆ.
ಈ ಸಭಾಂಗಣ ನೂರಾರು ಸಾಹಿತ್ಯ ಕೃತಿಗಳ, ಪುಸ್ತಕಗಳ ಲೋಕಾರ್ಪಣೆಗೆ ಸಾಕ್ಷಿಯಾಗಿದೆ. (ನನ್ನ ಮೊದಲ ಪುಸ್ತಕ 'ಒಳದನಿ' ಸಹ ಇಲ್ಲೇ ಬಿಡುಗಡೆಯಾಗಿತ್ತು). ಈ ನೆನಪುಗಳಷ್ಟೇ ಅಲ್ಲದೆ, ಈ ಸಭಾಂಗಣದಲ್ಲಿ ಕನ್ನಡದ ಪ್ರಖ್ಯಾತ ಸಾಹಿತಿ ಕಲಾವಿದರ ಹೆಜ್ಜೆ ಗುರುತುಗಳಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಕಚೇರಿಗೆ ಕಲಾಮಂದಿರ ಅಥವಾ ರಂಗಾಯಣದ ಆವರಣದಲ್ಲೇ ಸಾಕಷ್ಟು ಜಾಗ ಲಭ್ಯವಿರುವಾಗ, ಈ ಉದ್ದೇಶಕ್ಕಾಗಿ ಮನೆ ಅಂಗಳಕ್ಕೆ ಕೊಡಲಿಪೆಟ್ಟು ಹಾಕುವುದು ಅಕ್ಷಮ್ಯ. ಕಲೆ, ಸಾಹಿತ್ಯ, ಸಂಗೀತ ಮುಂತಾದ ಸಾಂಸ್ಕೃತಿಕ ಸಾರ್ವಜನಿಕ ಅಭಿವ್ಯಕ್ತಿಗೆ ಕೇಂದ್ರವಾಗಿರುವ ಒಂದು ಸಭಾಂಗಣವನ್ನು ಮತ್ತಷ್ಟು ಆಧುನೀಕರಣಗೊಳಿಸಿ, ಕಲಾಮಂದಿರದ ಸದ್ದು ಅಡಚಣೆ ಮಾಡದಂತೆ ಸೌಂಡ್ ಪ್ರೂಫ್ ಮಾಡುವ ನಿರ್ಧಾರ ಕೈಗೊಂಡಿದ್ದರೆ ಸಂಸ್ಕೃತಿ ಇಲಾಖೆಯ ಅಸ್ತಿತ್ವವೂ ಸಾರ್ಥಕವಾಗುತ್ತಿತ್ತು.

ಆದರೆ ಸಾಂಸ್ಕೃತಿಕ ವಲಯವನ್ನೂ ವಾಣಿಜ್ಯೀಕರಣಗೊಳಿಸಿ, ಕೇಸರೀಕರಣಕ್ಕೆ ಸಿದ್ಧಪಡಿಸುತ್ತಿರುವ ಬಿಜೆಪಿ ಆಡಳಿತ, ಮನೆ ಅಂಗಳದಂತಹ ಒಂದು ಸಾಹಿತ್ಯ ಪ್ರಜ್ಞೆಯ ಕುರುಹನ್ನೇ ಅಳಿಸಿಹಾಕಲು ಮುಂದಾಗಿರು ವುದು ದುರಂತ. ಇದರ ವಿರುದ್ಧ ಮೈಸೂರಿನ ಕನ್ನಡದ ಮನಸುಗಳು, ಸಾಹಿತ್ಯಕ ಹೃದಯಗಳು, ಕಲಾರಾಧಕರು ದನಿ ಎತ್ತಲೇಬೇಕಿದೆ. ಸರಕಾರದ ಈ ಖಂಡನಾರ್ಹ ಕ್ರಮದ ವಿರುದ್ಧ ಹೋರಾಡಬೇಕಿದೆ.
-ನಾ. ದಿವಾಕರ, ಮೈಸೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News