×
Ad

​ಮೆರಿಟ್ ಲಿಸ್ಟ್‌ನ ಅಗ್ರ ಕ್ರಮಾಂಕದಲ್ಲಿದ್ದರೂ ಶಿಕ್ಷಕ ಹುದ್ದೆ ನಿರಾಕರಣೆ: 30 ವರ್ಷಗಳ ಬಳಿಕ ನಡೆದದ್ದೇನು ?

Update: 2021-11-20 10:37 IST
ಗೆರಾಲ್ಡ್ ಜಾನ್ (Photo - times of india)

ಡೆಹ್ರಾಡೂನ್: ಶಿಕ್ಷಕ ಹುದ್ದೆ ಭರ್ತಿಗಾಗಿ ಸಿದ್ಧಪಡಿಸಿದ ಮೆರಿಟ್ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೂ, ಶಿಕ್ಷಕ ಹುದ್ದೆ ನಿರಾಕರಿಸಲ್ಪಟ್ಟ ಅಭ್ಯರ್ಥಿಯೊಬ್ಬರು ಮೂವತ್ತು ವರ್ಷಗಳ ಸುಧೀರ್ಘ ಹೋರಾಟದ ಬಳಿಕ ಅರ್ಹ ಹುದ್ದೆಯನ್ನು ಮರಳಿ ಗಳಿಸಿಕೊಂಡ ಸ್ವಾರಸ್ಯಕರ ಘಟನೆ ವರದಿಯಾಗಿದೆ.

ಪತ್ರಿಕೆಗಳಲ್ಲಿ ಬಂದ ಜಾಹೀರಾತಿಗೆ ಅನುಸಾರ 1989ರಲ್ಲಿ 24 ವರ್ಷದವರಾಗಿದ್ದ ಗೆರಾಲ್ಡ್ ಜಾನ್ ಎಂಬವರು ಡೆಹ್ರಾಡೂನಿನಲ್ಲಿರುವ ಅನುದಾನಿತ ಸಿಎನ್‌ಐ ಬಾಲಕರ ಇಂಟರ್ ಕಾಲೇಜಿನಲ್ಲಿ ವಾಣಿಜ್ಯ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಮೆರಿಟ್ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿದ್ದು, ಸಂದರ್ಶನದಲ್ಲಿ ಉತ್ತೀರ್ಣರಾದರೂ ಶಿಕ್ಷಕ ಹುದ್ದೆಯನ್ನು ಮಾತ್ರ ಇವರಿಗೆ ನಿರಾಕರಿಸಲಾಗಿತ್ತು.

ಫರೂಕಾಬಾದ್ ನಿವಾಸಿಯಾದ ಜಾನ್ ಮರು ವರ್ಷ ಅಲಹಾಬಾದ್ ಹೈಕೋರ್ಟ್ ಕಟ್ಟೆ ಏರಿದರು. 2000ನೇ ಇಸ್ವಿಯಲ್ಲಿ ಉತ್ತರಾಖಂಡ ಪ್ರತ್ಯೇಕ ರಾಜ್ಯವಾದಾಗ, ಈ ಪ್ರಕರಣವನ್ನು ನೈನಿತಾಲ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು. ಅಭ್ಯರ್ಥಿಯ 55ನೇ ವರ್ಷದಲ್ಲಿ ಉತ್ತರಾಖಂಡ ಹೈಕೋರ್ಟ್ 2020ರ ಡಿಸೆಂಬರ್‌ನಲ್ಲಿ ತೀರ್ಪು ನೀಡಿ, ಜಾನ್ ಅವರನ್ನು ನೇಮಕ ಮಾಡಿಕೊಳ್ಳುವ ಜತೆಗೆ 80 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತು.

ಈ ಪೈಕಿ 73 ಲಕ್ಷಗಳನ್ನು ಉತ್ತರಾಖಂಡ ಸರ್ಕಾರ ನೀಡಿತು. ಆದರೆ ಉಳಿದ ಏಳು ಲಕ್ಷಗಳನ್ನು ಉತ್ತರ ಪ್ರದೇಶ ಸರ್ಕಾರ ನೀಡಬೇಕಿತ್ತು. ಇದು ಇನ್ನೂ ಬಾಕಿ ಇದೆ. ಇದೀಗ ಶಾಲೆಯಲ್ಲಿ ಸೇವಾಜ್ಯೇಷ್ಠತೆ ಹೊಂದಿರುವ ಜಾನ್ ಹಂಗಾಮಿ ಪ್ರಾಚಾರ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

"ಪ್ರತಿಭಾಪಟ್ಟಿಯಲ್ಲಿ ಮತ್ತು ಸಂದರ್ಶನದಲ್ಲಿ ಮೊದಲ ಸ್ಥಾನ ಪಡೆದರೂ ಶಿಕ್ಷಕ ಹುದ್ದೆ ನಿರಾಕರಿಸಲಾಗಿತ್ತು. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ, ಸ್ಟೆನೊಗ್ರಫಿ ಕೌಶಲ ಹೊಂದಿದ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು. ಆದರೆ ಹುದ್ದೆಯ ಜಾಹೀರಾತು ನೀಡಿದಾಗ ಸ್ಟೆನೊಗ್ರಫಿಯನ್ನು ಅರ್ಹ ಮಾನದಂಡ ಎಂದು ಸೂಚಿಸಿರಲಿಲ್ಲ. ಉದ್ಯೋಗ ಪಡೆದ ಅಭ್ಯರ್ಥಿ ಅಧಿಕಾರಿಗಳ ಜತೆ ಷಾಮೀಲಾದ ಶಂಕೆ ಕಂಡುಬಂತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೆ" ಎಂದು ಜಾನ್ ಸುಧೀರ್ಘ ಹೋರಾಟದ ಹಿನ್ನೆಲೆ ವಿವರಿಸಿದರು.

2007ರಲ್ಲಿ ಉತ್ತರಾಖಂಡ ಹೈಕೋರ್ಟ್‌ನ ಏಕಸದಸ್ಯ ಪೀಠ ಜಾನ್ ವಿರುದ್ಧ ತೀರ್ಪು ನೀಡಿತ್ತು. ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಮಾಜಿ ಕೇಂದ್ರ ಸಚಿವ ಹಾಗೂ ವಕೀಲ ಸಲ್ಮಾನ್ ಖುರ್ಷಿದ್ ಪ್ರಕರಣ ಕೈಗೆತ್ತಿಕೊಂಡು ಉಚಿತವಾಗಿ ವಾದಿಸಿದರು. 10 ವರ್ಷದ ಬಳಿಕ ಪ್ರಕರಣವನ್ನು ಮತ್ತೆ ಉತ್ತರಾಖಂಡ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. 2020ರ ಡಿಸೆಂಬರ್‌ನಲ್ಲಿ ಜಾನ್ ಪರವಾಗಿ ತೀರ್ಪು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News