ಮೃತ ರೈತರ ಕುಟುಂಬಗಳಿಗೆ ರೂ 1 ಕೋಟಿ ಪರಿಹಾರ, ಎಂಎಸ್‍ಪಿ ಬೇಡಿಕೆ ಈಡೇರಿಸಿ: ಪ್ರಧಾನಿಗೆ ವರುಣ್ ಗಾಂಧಿ ಪತ್ರ
ಹೊಸದಿಲ್ಲಿ,ನ.20: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಶಾಸನಬದ್ಧಗೊಳಿಸುವಂತೆ ಮತ್ತು ಪ್ರತಿಭಟನಾನಿರತ ರೈತರ ವಿರುದ್ಧದ ರಾಜಕೀಯ ಪ್ರೇರಿತ ಸುಳ್ಳು ಎಫ್‌ಐಆರ್‌ಗಳನ್ನು ವಾಪಸ್ ಪಡೆಯುವಂತೆ ಬಿಜೆಪಿಯ ಪಿಲಿಭಿಟ್ ಸಂಸದ ವರುಣ ಗಾಂಧಿಯವರು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.
ಶನಿವಾರ ಬರೆದಿರುವ ಪತ್ರದಲ್ಲಿ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ನಿರ್ಧಾರಕ್ಕಾಗಿ ಮೋದಿಯವರಿಗೆ ಧನ್ಯವಾದಗಳನ್ನು ಸಲ್ಲಿಸಿರುವ ಗಾಂಧಿ,ಪ್ರತಿಭಟನೆ ಸಂದರ್ಭ ಮೃತಪಟ್ಟಿರುವ ರೈತರ ಕುಟುಂಬಗಳಿಗೆ ತಲಾ ಒಂದು ಕೋ.ರೂ.ಪರಿಹಾರವನ್ನು ಪ್ರಕಟಿಸುವಂತೆಯೂ ಆಗ್ರಹಿಸಿದ್ದಾರೆ.
ಅತ್ಯಂತ ಕಷ್ಟಕರ ಮತ್ತು ಪ್ರತಿಕೂಲ ಸ್ಥಿತಿಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾಗ 700ಕ್ಕೂ ಅಧಿಕ ರೈತ ಬಾಂಧವರು ಮೃತಪಟ್ಟಿದ್ದಾರೆ. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಮೊದಲೇ ಕೈಗೊಂಡಿದ್ದರೆ ಈ ಅಮಾಯಕ ಜೀವಗಳು ಉಳಿಯುತ್ತಿದ್ದವು ಎಂದಿದ್ದಾರೆ.
ಕನಿಷ್ಠ ಬೆಂಬಲ ಬೆಲೆಗಳಿಗೆ ಶಾಸನಬದ್ಧ ಖಾತರಿಯನ್ನು ಪಡೆಯುವುದು ತುಂಬ ಮುಖ್ಯವಾಗಿದೆ ಎಂದಿರುವ ಗಾಂಧಿ,ಎಂಎಸ್‌ಪಿ ಕೃಷಿ ವೆಚ್ಚಗಳ ಮತ್ತು ಬೆಲೆಗಳ ಆಯೋಗದ ಸೂತ್ರವನ್ನು ಆಧರಿಸಿರಬೇಕು ಎಂದು ಒತ್ತಿ ಹೇಳಿದ್ದಾರೆ.
ಅ.3ರಂದು ಉತ್ತರ ಪ್ರದೇಶದ ಲಖಿಂಪುರಖೇರಿಯಲ್ಲಿ ನಡೆದಿದ್ದ ಹಿಂಸಾಚಾರವನ್ನೂ ಪತ್ರದಲ್ಲಿ ಪ್ರಸ್ತಾಪಿಸಿರುವ ಗಾಂಧಿ, ಪ್ರಕರಣದಲ್ಲಿ ಆರೋಪಿಯಾಗಿರುವ ಆಶಿಷ್ ಮಿಶ್ರಾರ ತಂದೆ ಹಾಗೂ ಕೇಂದ್ರ ಸಚಿವ ಅಜಯ ಮಿಶ್ರಾ ವಿರುದ್ಧ ಸೂಕ್ತ ಕಠಿಣ ಕ್ರಮವನ್ನು ಕೈಗೊಳ್ಳುವಂತೆಯೂ ಮೋದಿಯವರನ್ನು ಆಗ್ರಹಿಸಿದ್ದಾರೆ.
ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು. ಸಚಿವರಿಗೆ ಸೇರಿದ ವಾಹನವನ್ನು ರೈತರ ಗುಂಪಿನ ಮೇಲೆ ಹರಿಸಲಾಗಿತ್ತು ಎಂದು ರೈತ ಸಂಘಟನೆಗಳು ಆರೋಪಿಸಿವೆ.
ಈ ಹೃದಯವಿದ್ರಾವಕ ಘಟನೆಯು ನಮ್ಮ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ ಎಂದು ಗಾಂಧಿ ಹೇಳಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಗಾಂಧಿ ಆಗಾಗ್ಗೆ ಪ್ರತಿಭಟನಾನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.