ಗುರುಗ್ರಾಮ: ನಮಾಝ್‍ಗೆ ಅವಕಾಶ ನೀಡುವುದಾಗಿ ಹೇಳಿ ನಂತರ ಹಿಂದೆ ಸರಿದ ಗುರುದ್ವಾರ ಸಮಿತಿ

Update: 2021-11-20 11:06 GMT

ಗುರುಗ್ರಾಮ:  ಗುರುಗ್ರಾಮದಲ್ಲಿ ಶುಕ್ರವಾರದ ನಮಾಝ್ ಅನ್ನು ನಿಗದಿತ ಸಾರ್ವಜನಿಕ ಸ್ಥಳಗಳಲ್ಲಿ ಸಲ್ಲಿಸುವುದಕ್ಕೆ ಹಿಂದುತ್ವ ಸಂಘಟನೆಗಳು ಹಾಗೂ ಕೆಲ ಸ್ಥಳೀಯರ ಸತತ ವಿರೋಧದ ನಡುವೆ ಅಲ್ಲಿನ ಗುರುದ್ವಾರ ಸಮಿತಿಯೊಂದು ಗುರುದ್ವಾರದ ಕೆಲ ಸ್ಥಳಗಳನ್ನು ನಮಾಝ್ ಸಲ್ಲಿಕೆಗೆ ನೀಡಲು ಮುಂದೆ ಬಂದಿದ್ದರೆ ಇದೀಗ ಆ ಸಮಿತಿ ತನ್ನ ನಿರ್ಧಾರದಿಂದ ವಾಪಸ್ ಸರಿದಿದೆ.

ಗುರುಗ್ರಾಮದ ಸಬ್ಝಿ ಮಂಡಿಯಲ್ಲಿರುವ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಮುಖ್ಯಸ್ಥರಾಗಿರುವ ಶೇರ್ದಿಲ್ ಸಿಂಗ್ ಸಿದ್ದು ಅವರು ಶುಕ್ರವಾರ ಮಾತನಾಡಿ, ಸದರ್ ಬಜಾರ್, ಸೆಕ್ಟರ್ 39, ಸೆಕ್ಟರ್ 46, ಮಾಡೆಲ್ ಟೌನ್ ಮತ್ತು  ಜಕೋಬಪುರದಲ್ಲಿರುವ ಐದು ಗುರುದ್ವಾರಗಳು  ತಮ್ಮ ಸ್ಥಳಗಳನ್ನು ನಮಾಝ್ ಸಲ್ಲಿಕೆಗೆ ಒದಗಿಸಲು ಮುಂದೆ ಬಂದಿವೆ ಎಂದಿದ್ದರು.

ಗುರುದ್ವಾರ ಸಮಿತಿಯ ಕೊಡುಗೆಯನ್ನು ಮನಃಪೂರ್ವಕವಾಗಿ ಒಪ್ಪಿದ್ದ ಮುಸ್ಲಿಂ ಗುಂಪುಗಳು ಇದೀಗ ತಮ್ಮ ಅಸಮಾಧಾನ ತೋಡಿಕೊಂಡಿವೆಯಲ್ಲದೆ ಬಲಪಂಥೀಯ ಗುಂಪುಗಳ ಒತ್ತಡಕ್ಕೆ ಮಣಿದು ಸಮಿತಿ ತನ್ನ ನಿರ್ಧಾರ ಬದಲಿಸಿದೆ ಎಂದಿವೆ.

ಶುಕ್ರವಾರ ಗುರುದ್ವಾರ ಸಮಿತಿಯ ಘೋಷಣೆಯ ಬೆನ್ನಿಗೆ  ಸ್ಥಳೀಯ ಝಟ್ಕಾ ಪ್ರಮಾಣೀಕರಣ ಪ್ರಾಧಿಕಾರದ ಅಧ್ಯಕ್ಷ ರವಿ ರಂಜನ್ ಅವರು ಸಮಿತಿಯ ಜತೆ ಸಭೆ ನಡೆಸಿ ನಂತರ ಮಾತನಾಡಿ, ಗುರುದ್ವಾರ ಸ್ಥಳವನ್ನು ಸಿಖ್ ಧರ್ಮದ ಹೊರತಾಗಿ ಬೇರೆ ಉದ್ದೇಶಗಳಿಗೆ ಬಳಸುವ ಹಾಗಿಲ್ಲ ಎಂದಿದ್ದರು. ನಂತರ ಸಮಿತಿ ಅಧ್ಯಕ್ಷ ಸಿದ್ದು ಕೂಡ ತಮ್ಮ ನಿಲುವು ಬದಲಿಸಿ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ,  ಗುರುದ್ವಾರದ ಒಳಗೆ ನಮಾಝ್‍ಗೆ ಅನುಮತಿಸುವ ಉದ್ದೇಶವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News