ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ : ಇಂದೋರ್ ಗೆ ಸತತ 5ನೇ ವರ್ಷ ಅಗ್ರ ಸ್ಥಾನ

Update: 2021-11-20 17:06 GMT

ಹೊಸದಿಲ್ಲಿ, ನ. 20: ರಾಷ್ಟ್ರ ವ್ಯಾಪಿ ವಾರ್ಷಿಕ ಸ್ವಚ್ಛ ತಾ ಸಮೀಕ್ಷೆಯಲ್ಲಿ ಮಧ್ಯಪ್ರದೇಶದ ಇಂದೋರ್ ಸತತ ಐದನೇ ಬಾರಿಗೆ ಭಾರತದ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ. ರಾಜ್ಯಗಳ ವಿಭಾಗದಲ್ಲಿ ಚತ್ತೀಸ್‌ಗಢ ಮೊದಲನೇ ಸ್ಥಾನ ಉಳಿಸಿಕೊಂಡಿದೆ. 

ಕೇಂದ್ರ ಸರಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ 2021ನೇ ಸಾಲಿನ ‘ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ’ಯನ್ನು ಶನಿವಾರ ಘೋಷಣೆ ಮಾಡಿದೆ. ಸ್ವಚ್ಛ ನಗರಗಳಲ್ಲಿ ಎರಡನೇ ಮತ್ತು ಮೂರನೇ ಸ್ಥಾನವನ್ನು ಕ್ರಮವಾಗಿ ಸೂರತ್ ಹಾಗೂ ವಿಜಯವಾಡ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ವಾರಣಾಸಿ ‘ಸ್ವಚ್ಛ ಗಂಗಾ ನಗರ’ ಪ್ರಶಸ್ತಿ ಪಡೆದುಕೊಂಡಿದೆ. 

ಬಿಹಾರದ ಮುಂಗೇರ್ ಹಾಗೂ ಪಾಟ್ನಾ ಎರಡನೇ ಹಾಗೂ ಮೂರನೇ ಸ್ಥಾನ ಪಡೆದುಕೊಂಡಿದೆ. 40 ಲಕ್ಷ ಜನಸಂಖ್ಯೆ ಇರುವ ದೇಶದ 5 ಅಗ್ರ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಎರಡನೇ ಸ್ಥಾನದಲ್ಲಿದೆ. 3 ಲಕ್ಷದಿಂದ 10 ಲಕ್ಷ ಜನಸಂಖ್ಯೆ ಇರುವ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಎರಡನೇ ಸ್ಥಾನದಲ್ಲಿದ್ದರೆ, ಮೈಸೂರು ಐದನೇ ಸ್ಥಾನದಲ್ಲಿದೆ. 25ರಿಂದ 50 ಸಾವಿರ ಜನಸಂಖ್ಯೆ ಇರುವ ದಕ್ಷಿಣ ವಲಯದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಾಲ್ಕನೇ ಸ್ಥಾನದಲ್ಲಿದೆ. 

50ರಿಂದ 1 ಲಕ್ಷ ಜನಸಂಖ್ಯೆ ಇರುವ ದಕ್ಷಿಣ ವಲಯದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಬಾಗಲಕೋಟೆಯ ಮುಧೋಳ 5ನೇ ಸ್ಥಾನದಲ್ಲಿದೆ. ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಹಾಗೂ ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಇತ್ತೀಚೆಗಿನ ರಾಷ್ಟ್ರ ವ್ಯಾಪಿ ಸ್ವಚ್ಛತಾ ಸಮೀಕ್ಷೆಯಲ್ಲಿ 4,320 ನಗರಗಳನ್ನು 28 ದಿನಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 4.2 ಕೋಟಿ ಜನರ ಪ್ರತಿಕ್ರಿಯೆ ಸ್ವೀಕರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News