ಆರೋಪಿಗಳು ಸಂಚು ನಡೆಸಿದ್ದಾರೆ ಎಂಬುವುದಕ್ಕೆ ಸಾಕ್ಷ್ಯಗಳಿಲ್ಲ: ಆರ್ಯನ್ ಖಾನ್ ಜಾಮೀನು ಆದೇಶದಲ್ಲಿ ಬಾಂಬೆ ಹೈಕೋರ್ಟ್

Update: 2021-11-20 12:27 GMT

ಮುಂಬೈ: ನಾರ್ಕಾಟಿಕ್ಸ್ ಕಂಟ್ರೋಲ್ ಬ್ಯುರೋ ಆರೋಪಿಸಿದಂತೆ  ಆರೋಪಿಗಳ ಜತೆಯಾಗಿ ಸಂಚು ನಡೆಸಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಯಾವುದೇ ಪೂರಕ ಸಾಕ್ಷ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಆರ್ಯನ್ ಖಾನ್, ಅರ್ಬಾಝ್ ಮರ್ಚಂಟ್ ಹಾಗೂ ಮುನ್ಮುನ್ ಧಮೇಚಾ ಅವರ ಜಾಮೀನು ಆದೇಶದಲ್ಲಿ ತಿಳಿಸಿದೆ.

ಕ್ರೂಸ್ ಒಂದರ ಮೇಲಿನ ದಾಳಿಯ ನಂತರ ಅಕ್ಟೋಬರ್ 2ರಂದು ಬಂಧಿಸಲ್ಪಟ್ಟಿದ್ದ ಮೂವರಿಗೂ ಅಕ್ಟೋಬರ್ 28ರಂದು  ಜಸ್ಟಿಸ್ ನಿತಿನ್ ಸಂಬ್ರೆ ಅವರ ಏಕಸದಸ್ಯ ಪೀಠ ಜಾಮೀನು ಒದಗಿಸಿತ್ತು.

ಈ 14 ಪುಟಗಳ ಜಾಮೀನು ಆದೇಶವನ್ನು ಶನಿವಾರ ಲಭ್ಯಗೊಳಿಸಲಾಗಿದೆ.

"ಎಲ್ಲಾ ಆರೋಪಿಗಳು ಸಮಾನ ಉದ್ದೇಶದಿಂದ ಅಕ್ರಮ ಕೃತ್ಯಗಳನ್ನು ನಡೆಸುವ ಸಂಚು ಹೂಡಿದ್ದಾರೆಂಬುದಕ್ಕೆ ಯಾವುದೇ ಪೂರಕ ಸಾಕ್ಷ್ಯಗಳಿಲ್ಲ. ಆದರೆ ಇಲ್ಲಿಯ ತನಕದ ತನಿಖೆಯ ಪ್ರಕಾರ ಅರ್ಜಿದಾರ/ಆರೋಪಿ ಸಂಖ್ಯೆ 1 ಮತ್ತು 2 (ಆರ್ಯನ್ ಮತ್ತು ಅರ್ಬಾಝ್) ಅವರು ಆರೋಪಿ ಸಂಖ್ಯೆ 3 (ಮುನ್ಮುನ್) ಅವರಿಗಿಂತ ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದರು" ಎಂದು ಜಾಮೀನು ಆದೇಶದಲ್ಲಿ ಹೇಳಲಾಗಿದೆ.

"ಅರ್ಜಿದಾರರು ಹಡಗಿನಲ್ಲಿ ಪ್ರಯಾಣಿಸುತ್ತಿದ್ದರೆಂಬ ಒಂದೇ ಕಾರಣಕ್ಕೆ ಅವರ ವಿರುದ್ಧ ಸೆಕ್ಷನ್ 29(ಸಂಚು) ಆರೋಪ ಹೊರಿಸಲು ಸಾಧ್ಯವಿಲ್ಲ. ಆರ್ಯನ್ ಫೋನ್‍ನಿಂದ ದೊರೆತ ವಾಟ್ಸ್ಯಾಪ್ ಚಾಟ್‍ಗಳ ಬಗೆಗಿನ ಎನ್‍ಸಿಬಿ ಹೇಳಿಕೆ ಕುರಿತೂ ಜಾಮೀನು ಆದೇಶದಲ್ಲಿ ಉಲ್ಲೇಖಗೊಂಡಿದೆಯಲ್ಲದೆ ಸಂಚು ಎಂದು ತಿಳಿಯಬಹುದಾದಂತಹ ಯಾವುದೇ ಆಕ್ಷೇಪಾರ್ಹ ವಿಚಾರ ಕಂಡು ಬಂದಿರಲಿಲ್ಲ" ಎಂದು ಹೇಳಿದೆ.

"ಆರೋಪಗಳನ್ನು ಒಂದು ವೇಳೆ ಪರಿಗಣಿಸಿದರೂ ಡ್ರಗ್ಸ್ ಸೇವನೆಗೆ ಗರಿಷ್ಠ ಶಿಕ್ಷೆ ಒಂದು ವರ್ಷಕ್ಕಿಂತ ಹೆಚ್ಚಿಲ್ಲ. ಅರ್ಜಿದಾರರು ಈಗಾಗಲೇ ಸುಮಾರು 25 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ. ಅವರು ಡ್ರಗ್ಸ್ ಸೇವಿಸಿದ್ದಾರೆಯೇ ಎಂದು ತಿಳಿಯಲು ಸೂಕ್ತ ಸಮಯದಲ್ಲಿ ಅವರ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿರಲಿಲ್ಲ" ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News