ರಾಜಸ್ಥಾನ : ಇಂದು 15 ಸಚಿವರ ಪ್ರಮಾಣ ವಚನ ಸ್ವೀಕಾರ

Update: 2021-11-21 03:46 GMT
ಫೈಲ್ ಫೋಟೊ (PTI)

ಜೈಪುರ: ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಬಣಗಳ ನಡುವೆ ಸಮತೋಲನ ಸಾಧಿಸಲು ನಡೆಸಿದ ಕರಸತ್ತು ಮುಕ್ತಾಯವಾಗಿದ್ದು, ಒಟ್ಟು 11 ಮಂದಿ ಸಂಪುಟ ಸಚಿವರು ಮತ್ತು ನಾಲ್ವರು ರಾಜ್ಯ ಸಚಿವರನ್ನು ಒಳಗೊಂಡ ಸಂಪುಟ ರವಿವಾರ ಪ್ರಮಾಣ ವಚನ ಸ್ವೀಕರಿಸಲಿದೆ.

2023ರಲ್ಲಿ ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಪಂಜಾಬ್‌ನ ಪರಿಸ್ಥಿತಿ ಇಲ್ಲೂ ಪುನರಾವರ್ತನೆಯಾಗದಂತೆ ಕಾಂಗ್ರೆಸ್ ಮುಖಂಡರು ಎಚ್ಚರ ವಹಿಸಿದ್ದಾರೆ. ಗೆಹ್ಲೋಟ್ ಮತ್ತು ಪೈಲಟ್ ಬಣಗಳ ನಡುವಿನ ಸಂಘರ್ಷವನ್ನು ಶಮನಗೊಳಿಸುವ ಪ್ರಯತ್ನವಾಗಿ ಕಾಂಗ್ರೆಸ್ ಹೈಮಾಂಡ್ ಈ ಸಾಹಸಕ್ಕೆ ಕೈ ಹಾಕಿದೆ.

ರಾಜಸ್ಥಾನದ ಹೊಸ ಸಚಿವ ಸಂಪುಟ 12 ಹೊಸ ಮುಖಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಪೈಲಟ್ ಬಣದ ಐವರು ಸಚಿವರು ಸೇರಿದ್ದಾರೆ. ಪೈಲಟ್ ನಿಷ್ಠ ಶಾಸಕರಾದ ಹೇಮರಾಮ್ ಚೌಧರಿ, ವಿಶ್ವೇಂದ್ರ ಸಿಂಗ್, ಮುರಾರಿಲಾಲ್ ಮೀನಾ, ರಮೇಶ್ ಮೀನಾ ಮತ್ತು ಬೃಜೇಂದ್ರ ಓಲಾ ಸಚಿವ ಹುದ್ದೆ ಪಡೆಯಲಿದ್ದಾರೆ.

ವಿಶ್ವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಅವರನ್ನು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಜತೆಗೆ ಕಳೆದ ಜುಲೈನಲ್ಲಿ ಸಂಪುಟದಿಂದ ವಜಾ ಮಾಡಲಾಗಿತ್ತು. ರಾಜಸ್ಥಾನ ಕಾಂಗ್ರೆಸ್ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ, ರವಿವಾರ ಪ್ರಮಾಣ ವಚನ ಸ್ವೀಕರಿಸುವ 15 ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಮೂವರು ರಾಜ್ಯ ಸಚಿವರಿಗೆ ಸಂಪುಟ ದರ್ಜೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. "ರಾಜಸ್ಥಾನದ ಎಲ್ಲ ಹೊಸ ಸಚಿವರಿಗೆ ಅಭಿನಂದನೆಗಳು. ರಾಜ್ಯ ಸಚಿವರಾಗಿದ್ದ ಮೂವರಿಗೆ ಸಂಪುಟ ದರ್ಜೆಗೆ ಬಡ್ತಿ ನೀಡಲಾಗಿದೆ" ಎಂದು ಶನಿವಾರ ತಡರಾತ್ರಿ ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News