ಸಿಬಿಐ ನಿರ್ದೇಶಕರಿಗೆ 5 ವರ್ಷಗಳ ಅವಧಿಯನ್ನು ನೀಡಿರುವ ಸುಗ್ರೀವಾಜ್ಞೆಯು ಸಂಸ್ಥೆಯ ಸ್ವಾಯತ್ತತೆಯನ್ನು ದುರ್ಬಲಗೊಳಿಸಿದೆ

Update: 2021-11-21 12:30 GMT
Photo: Subodh Kumar Jaiswal (PTI Photo)

ಹೊಸದಿಲ್ಲಿ, ನ.21: ಕೇಂದ್ರ ಸರಕಾರವು ನ.14ರಂದು ಹೊರಡಿಸಿರುವ ಸುಗ್ರೀವಾಜ್ಞೆಗಳು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಈ.ಡಿ)ದ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಅವಕಾಶವನ್ನು ನೀಡಿವೆ. ಇವೆರಡೂ ಹುದ್ದೆಗಳು ಪ್ರಸಕ್ತ ಎರಡು ವರ್ಷಗಳ ಸ್ಥಿರ ಅಧಿಕಾರಾವಧಿಯನ್ನು ಹೊಂದಿವೆ. ಸುಗ್ರೀವಾಜ್ಞೆಗಳು ಹೊರಬಿದ್ದ ನಾಲ್ಕೇ ದಿನಗಳಲ್ಲಿ ಇವೆರಡೂ ಸಂಸ್ಥೆಗಳ ಅಧಿಕಾರಾವಧಿಯ ವಿಸ್ತರಣೆಯನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಕನಿಷ್ಠ ಮೂರು ಅರ್ಜಿಗಳು ಸಲ್ಲಿಕೆಯಾಗಿವೆ.

ಈ ಹಂತ ಹಂತದ ವಿಸ್ತರಣೆಗಳು ಈ ಸಂಸ್ಥೆಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸಿವೆ ಮತ್ತು ಅವುಗಳ ಮೇಲೆ ಸರಕಾರದ ನಿಯಂತ್ರಣವನ್ನು ಹೆಚ್ಚಿಸುತ್ತವೆ ಎಂದು ಹಲವಾರು ಪ್ರತಿಪಕ್ಷ ನಾಯಕರು ಮತ್ತು ಮಾಜಿ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಸುದ್ದಿ ಜಾಲತಾಣ Scroll.in ಈ ಕುರಿತು ವಿಶ್ಲೇಷಣಾತ್ಮಕ ವರದಿಯನ್ನು ಪ್ರಕಟಿಸಿದ್ದು, ಅದರ ಸಾರಾಂಶವಿಲ್ಲಿದೆ.

ಎರಡು ವರ್ಷಗಳ ಸ್ಥಿರ ಅಧಿಕಾರಾವಧಿಯ ಬಳಿಕ ಸಿಬಿಐ ಮತ್ತು ಈಡಿ ನಿರ್ದೇಶಕರ ಅಧಿಕಾರಾವಧಿಯನ್ನು ‘ಸಾರ್ವಜನಿಕ ಹಿತಾಸಕ್ತಿಯಲ್ಲಿ’ ಒಂದು ಸಲಕ್ಕೆ ಒಂದು ವರ್ಷದಂತೆ ಐದು ವರ್ಷಗಳಿಗೆ ವಿಸ್ತರಿಸಬಹುದು ಮತ್ತು ವಿಸ್ತರಣೆಗೆ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು ಎಂದು ಈ ಸುಗ್ರೀವಾಜ್ಞೆಗಳು ಹೇಳುತ್ತವೆ.

ನಿರ್ದೇಶಕರು ತಮ್ಮ ಆರಂಭಿಕ ನೇಮಕಾತಿಯಿಂದ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಬಳಿಕ ಮತ್ತೆ ಈ ಒಂದು ವರ್ಷದ ವಿಸ್ತರಣೆಯನ್ನು ನೀಡುವಂತಿಲ್ಲ ಎಂದು ಈ ಸುಗ್ರೀವಾಜ್ಞೆಗಳು ಹೇಳುತ್ತವೆ.

ಈ ಸುಗ್ರೀವಾಜ್ಞೆಗಳು ಸಿಬಿಐ ನಿರ್ದೇಶಕರ ಮೇಲೆ ಪರಿಣಾಮಕಾರಿ ನಿಯಂತ್ರಣವನ್ನು ಹೊಂದಲು ಕೇಂದ್ರ ಸರಕಾರಕ್ಕೆ ಅವಕಾಶ ನೀಡುತ್ತವೆ ಮತ್ತು ಈ ಒಂದು ವರ್ಷದ ವಿಸ್ತರಣೆಗಳು ಈ ಸಂಸ್ಥೆಗಳ ಸ್ವತಂತ್ರ ಕಾರ್ಯನಿರ್ವಹಣೆಗೆ ಹಾನಿಯನ್ನುಂಟು ಮಾಡುತ್ತವೆ ಹಾಗೂ ಅವುಗಳನ್ನು ರಾಜಕೀಯ ಹಸ್ತಕ್ಷೇಪದಿಂದ ರಕ್ಷಿಸಲು ಅಗತ್ಯವಾಗಿರುವ ಸ್ಥಿರತೆಯನ್ನು ಕಿತ್ತುಕೊಳ್ಳುತ್ತವೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅರ್ಜಿಗಳಲ್ಲಿ ವಾದಿಸಲಾಗಿದೆ.
 
ಪ್ರಕ್ರಿಯೆಯನ್ನು ಪಾರದರ್ಶಕವಾಗಿರಿಸಲು ಐದು ವರ್ಷಗಳ ಅಧಿಕಾರಾವಧಿಯನ್ನು ಒಂದೇ ಬಾರಿಗೆ ನೀಡಬೇಕು,ಇದರಿಂದ ಸಿಬಿಐ ಮತ್ತು ಈ.ಡಿ.ನಿರ್ದೇಶಕರ ತಲೆಯ ಮೇಲೆ ಕತ್ತಿ ತೂಗಾಡುತ್ತಿರುವುದಿಲ್ಲ ಎಂದು ಸಿಬಿಐನ ಸ್ವತಂತ್ರ ಕಾರ್ಯನಿರ್ವಹಣೆಗಾಗಿ ಕೆಲವು ಮಾರ್ಗಸೂಚಿಗಳನ್ನು ವಿಧಿಸಿದ್ದ 1998ರ ಸರ್ವೋಚ್ಚ ನ್ಯಾಯಾಲಯದ ಪ್ರಕರಣದಲ್ಲಿ ಅರ್ಜಿದಾರರಾಗಿದ್ದ ವಿನೀತ್ ನಾರಾಯಣ್ ಹೇಳಿದರು.

ನೀವು ನಮ್ಮ ಮಾತು ಕೇಳುತ್ತಿದ್ದರೆ ನೀವು ನಿಮ್ಮ ಅಧಿಕಾರಾವಧಿಯನ್ನು ಮೀರಿ ವಿಸ್ತರಣೆಯನ್ನು ಪಡೆಯಬಹುದು ಎಂಬ ಆಮಿಷವನ್ನು ಸರಕಾರವು ಸಿಬಿಐ ಮತ್ತು ಈ.ಡಿ.ನಿರ್ದೇಶಕರ ಮುಂದಿರಿಸಿದೆ ಎಂದು ಇನ್ನೋರ್ವ ಮಾಜಿ ಸಿಬಿಐ ನಿರ್ದೇಶಕರು ಹೇಳಿದರು.

ಸಿಬಿಐ ನಿರ್ದೇಶಕರ ನೇಮಕಾತಿ ಮತ್ತು ಕಾರ್ಯನಿರ್ವಹಣೆಗೆ ಸ್ವಾತಂತ್ರ ಮತ್ತು ಸ್ಥಿರತೆಯನ್ನು ನೀಡಲು ಪ್ರಯತ್ನಗಳು ನಡೆದಿದ್ದರೂ ಅವರ ನೇಮಕಾತಿಗಳು ಮತ್ತು ಅಧಿಕಾರಾವಧಿಗಳು ಆಗಾಗ್ಗೆ ವಿವಾದಗಳಿಗೆ ಗುರಿಯಾಗುತ್ತಲೇ ಇವೆ.

ಸಿಬಿಐ ನಿರ್ದೇಶಕರ ನಿವೃತ್ತಿ ದಿನಾಂಕವೇನೇ ಇದ್ದರೂ ಅವರು ಕನಿಷ್ಠ ಎರಡು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಮಾರ್ಗಸೂಚಿಗಳಲ್ಲಿ ಹೇಳಿತ್ತು. ಈ ಕನಿಷ್ಠ ಅಧಿಕಾರಾವಧಿಯನ್ನು ಬಿಂಬಿಸಲು ಬಳಿಕ ಕಾನೂನನ್ನು ಬದಲಿಸಲಾಗಿತ್ತು.

ಆದಾಗ್ಯೂ ಸಿಬಿಐನ ಇತ್ತೀಚಿನ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರ ನೇಮಕಾತಿಯು ಅದನ್ನು ಸದ್ದಿಲ್ಲದೆ ತಿರುಚಿದೆ. ಅವರ ನೇಮಕಾತಿ ಪತ್ರದಲ್ಲಿ,ಜೈಸ್ವಾಲ್ ರನ್ನು ‘ಅಧಿಕಾರ ವಹಿಸಿಕೊಂಡ ದಿನದಿಂದ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ;ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕಗೊಳಿಸಲಾಗಿದೆ ’ ಎಂದು ಉಲ್ಲೇಖಿಸಲಾಗಿದೆ.

‘ಮುಂದಿನ ಆದೇಶದವರೆಗೆ,ಯಾವುದು ಮೊದಲೋ ಅಲ್ಲಿಯವರೆಗೆ’ ಎನ್ನುವುದನ್ನು ಬಳಸಿರುವುದು ಅಸಾಧಾರಣವಾಗಿದೆ. ಈ ಪದಪುಂಜವನ್ನು ಏಕೆ ಬಳಸಲಾಗಿದೆ ಎಂದು ಆರ್ಟಿಐ ಕಾಯ್ದೆಯಡಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇದು ಸಿಬಿಐಗೆ ಸಂಬಂಧಿಸಿದ ಶಾಸನ ಮತ್ತು ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಪ್ರಧಾನಿಗಳಿಗೆ ಪತ್ರವನ್ನೂ ಬರೆದಿದ್ದರು.

ನೂತನ ಸುಗ್ರೀವಾಜ್ಞೆಯು ಹುದ್ದೆಗೆ ವ್ಯಕ್ತಿಯ ನಿಗದಿತ ಮತ್ತು ಕನಿಷ್ಠ ಅಧಿಕಾರಾವಧಿಯನ್ನು ಕಡೆಗಣಿಸಿ ಒಂದು ಸಲಕ್ಕೆ ಒಂದು ವರ್ಷದಂತೆ ನಿರ್ದೇಶಕರ ಅಧಿಕಾರಾವಧಿಯನ್ನು ನಿರ್ಧರಿಸಲು ಕೇಂದ್ರ ಸರಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ. ಸಿಬಿಐ ನಿರ್ದೇಶಕರ ನೇಮಕಾತಿಯನ್ನು ನಿಷ್ಪಕ್ಷವಾಗಿಸಲು ಹಲವಾರು ಕ್ರಮಗಳ ಹೊರತಾಗಿಯೂ ಈ ಪ್ರಕ್ರಿಯೆಯನ್ನು ಸಾಮಾಜಿಕ ಹೋರಾಟಗಾರರು ಆಗಾಗ್ಗೆ ಪ್ರಶ್ನಿಸುತ್ತಲೇ ಬಂದಿದ್ದಾರೆ.
 
ಪ್ರಸಕ್ತ ಆಯ್ಕೆ ಮಾನದಂಡವು ಜ್ಯೇಷ್ಠತೆ,ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರ ವಿರೋಧಿ ಪ್ರಕರಣಗಳ ತನಿಖೆಯಲ್ಲಿ ಅನುಭವ ಇವುಗಳನ್ನು ಆಧರಿಸಿದೆ. ಆದರೆ ತುಲನಾತ್ಮಕವಾಗಿ ಕಿರಿಯ ಅಧಿಕಾರಿಗಳು ನಿರ್ದೇಶಕರಾಗಿ ನೇಮಕಗೊಂಡಿರುವ ನಿದರ್ಶನಗಳ ಹಿನ್ನೆಲೆಯಲ್ಲಿ ಅವು ಅಸ್ಪಷ್ಟವಾಗಿವೆ ಎಂಬ ಟೀಕೆಗೆ ಗುರಿಯಾಗಿವೆ. ಇದಲ್ಲದೆ ಸಿಬಿಐ ನಿರ್ದೇಶಕರ ನೇಮಕಾತಿಯಲ್ಲಿ ಸರಕಾರವು ಕೈಯಾಡಿಸಲು ಪ್ರಯತ್ನಿಸಿರುವ ಹಲವಾರು ನಿದರ್ಶನಗಳೂ ಇವೆ.

2018ರಲ್ಲಿ ಆಗಿನ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ನಡುವೆ ಕಚ್ಚಾಟದ ಬಳಿಕ ಇಬ್ಬರನ್ನೂ ರಜೆಯ ಮೇಲೆ ಕಳುಹಿಸಿದ್ದ ಸರಕಾರವು ಕಿರಿಯ ಅಧಿಕಾರಿ ಎಂ.ನಾಗೇಶ್ವರ ರಾವ್ ಅವರನ್ನು ಮಧ್ಯಂತರ ನಿರ್ದೇಶಕರನ್ನಾಗಿ ನೇಮಕಗೊಳಿಸಿತ್ತು. ರಾವ್ ಬಿಜೆಪಿ ಸರಕಾರಕ್ಕೆ ಹತ್ತಿರದ ವ್ಯಕ್ತಿ ಎಂದು ಹೇಳಲಾಗಿದೆ. 2021 ಎಪ್ರಿಲ್ನಲ್ಲಿ ಸರ್ವೋಚ್ಚ ನ್ಯಾಯಾಲಯವು.ಸಿಬಿಐ ನಿರ್ದೇಶಕರ ಹುದ್ದೆಗೆ ಮಧ್ಯಂತರ ವ್ಯವಸ್ಥೆಗಳನ್ನು ಮುಂದುವರಿಸುವಂತಿಲ್ಲ ಎಂದು ಸರಕಾರಕ್ಕೆ ಸ್ಪಷ್ಟಪಡಿಸಿತ್ತು.

ಈಗಾಗಲೇ ರಾಜಕೀಯಗೊಂಡಿರುವ ಸನ್ನಿವೇಶದಲ್ಲಿ ಸಿಬಿಐ ನಿದೇಶಕರ ನೇಮಕಾತಿಗೆ ಸರಕಾರಕ್ಕೆ ಹೆಚ್ಚಿನ ನಿಯಂತ್ರಣವನ್ನು ನೀಡುವುದು ಸಂಸ್ಥೆಯ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ.

ಈ.ಡಿ.ನಿರ್ದೇಶಕ ಎಸ್.ಕೆ.ಮಿಶ್ರಾರ ನಿವೃತ್ತಿಗೆ ಕೆಲವೇ ದಿನಗಳ ಮುನ್ನ ಸುಗ್ರೀವಾಜ್ಞೆಗಳನ್ನು ಹೊರಡಿಸಿರುವ ಸಮಯವೂ ಪ್ರಶ್ನೆಗಳನ್ನು ಹುಟ್ಟಿಸಿದೆ. ಕಳೆದ ವರ್ಷ ಅವರ ಅಧಿಕಾರಾವಧಿಯನ್ನು ಪೂರ್ವಾನ್ವಯವಾಗಿ ಒಂದು ವರ್ಷ ವಿಸ್ತರಿಸಲಾಗಿತ್ತು. ಸುಗ್ರೀವಾಜ್ಞೆಯ ಮೂಲಕ ಅವರ ಅಧಿಕಾರಾವಧಿಯನ್ನು ಈಗಾಗಲೇ ಇನ್ನೊಂದು ವರ್ಷ ವಿಸ್ತರಿಸಲಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಕೇವಲ ಎರಡು ವಾರಗಳಿರುವಾಗ ಸುಗ್ರೀವಾಜ್ಞೆಗಳನ್ನು ತಂದಿದ್ದೇಕೆ ಎಂದು ಪ್ರತಿಪಕ್ಷವೂ ಪ್ರಶ್ನಿಸಿದೆ.

ಕೇಂದ್ರವು ತನ್ನ ರಾಜಕೀಯ ಗುರಿಗಳಿಗಾಗಿ ಸಿಬಿಐ ಅನ್ನು ಆಗಾಗ್ಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪ್ರತಿಪಕ್ಷ ನೇತೃತ್ವದ ಸರಕಾರಗಳು ಹಲವಾರು ಬಾರಿ ಆರೋಪಿಸಿವೆ. 2013ರಲ್ಲಿ ಸರ್ವೋಚ್ಚ ನ್ಯಾಯಾಲಯವು ಸಿಬಿಐ ಅನ್ನು ‘ತನ್ನ ಮಾಲಿಕನ ಧ್ವನಿಯಲ್ಲಿ ಮಾತನಾಡುವ ಪಂಜರದ ಗಿಣಿ ’ ಎಂದು ಬಣ್ಣಿಸಿತ್ತು.

ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News