"ಇಂದಿರಾ ಗಾಂಧಿ ಖಾಲಿಸ್ತಾನಿಗಳನ್ನು ಸೊಳ್ಳೆಗಳಂತೆ ತುಳಿದಿದ್ದರು" ಎಂದಿದ್ದ ಕಂಗನಾ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ: ಸಂಪೂರ್ಣ ಸಿಖ್ ಸಮುದಾಯವನ್ನೇ ಖಾಲಿಸ್ತಾನಿ ಭಯೋತ್ಪಾದಕರು ಎಂದು ಉಲ್ಲೇಖಿಸಿದ್ದ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಅವರನ್ನು ಸೊಳ್ಳೆಯಂತೆ ತಮ್ಮ ಕಾಲಡಿಯಲ್ಲಿ ಹಿಸುಕಿ ಹಾಕಿದ್ದರು ಎಂದು ಬಾಲಿವುಡ್ ನಟಿ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ಕುಖ್ಯಾತಿ ಪಡೆದಿರುವ ಕಂಗನಾ ರಣಾವತ್ ಪ್ರಕಟಿಸಿದ್ದ ಇನ್ಸ್ಟಾಗ್ರಾಂ ಸ್ಟೋರಿ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಕಂಗನಾ ಹೇಳಿಕೆಯನ್ನು ಖಂಡಿಸಿ ಅಕಾಲಿದಳ ಮುಖ್ಯಸ್ಥ ಮನ್ಜಿಂದರ್ ಸಿಂಗ್ ಸಿರ್ಸಾ ನಟಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಸಿರ್ಸಾರವರು ದಿಲ್ಲಿ ಸಿಖ್ ಗುರುದ್ವಾರ ನಿರ್ವಹಣಾ ಕಮಿಟಿಯ ಅಧ್ಯಕ್ಷರಾಗಿದ್ದು, ಕಮಿಟಿಯು ತನ್ನ ಇತ್ತೀಚಿನ ಹೇಳಿಕೆಯಲ್ಲಿ ಈ ಕುರಿತು "ಕಂಗನಾ ರಣಾವತ್ ಉದ್ದೇಶಪೂರ್ವಕವಾಗಿ ರೈತರ ಪ್ರತಿಭಟನೆಯನ್ನು ಖಾಲಿಸ್ತಾನಿ ಚಳುವಳಿ ಎಂದು ಬಿಂಬಿಸಿದ್ದಾರೆ" ಎಂದು ಹೇಳಿದೆ.
ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕಂಗನಾ ರಣಾವತ್ "ಖಾಲಿಸ್ತಾನಿ ಭಯೋತ್ಪಾದಕರು ಇಂದು ಸರಕಾರವನ್ನು ತಿರುಚಬಹುದು ಆದರೆ ನಾವು ಒಮ್ಮ ಮಹಿಳೆಯನ್ನು ಮರೆಯಬಾರದು. ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ತಮ್ಮ ಚಪ್ಪಲಿಯಲ್ಲಿ ತುಳಿದಿದ್ದರು. ಅವರು ಈ ದೇಶಕ್ಕೆ ಎಷ್ಟೇ ಸಂಕಟವನ್ನು ತಂದೊಡ್ಡಿದ್ದರೂ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅವರನ್ನು ಸೊಳ್ಳೆಗಳಂತೆ ತುಳಿದಳು. ಇಂದಿಗೂ ಅಳ ಹೆಸರು ಕೇಳಿದರೆ ನಡುಗುತ್ತಾರೆ. ನಮಗೆ ಅವರಂತಹ ಗುರು ಬೇಕು" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.