×
Ad

ದೇಶದ ಅತ್ಯಂತ ಶಕ್ತಿಶಾಲಿ ವಿಧ್ವಂಸಕ ನೌಕೆ ಭಾರತೀಯ ನೌಕಾಪಡೆಗೆ ಸೇರ್ಪಡೆ

Update: 2021-11-21 20:20 IST

ಮುಂಬೈ, ನ.21: ಭಾರತೀಯ ನೌಕಾಪಡೆಗೆ ದೇಶದ ಅತ್ಯಂತ ಶಕ್ತಿಶಾಲಿ ಕ್ಷಿಪಣಿ ವಿಧ್ವಂಸಕ ನೌಕೆ ‘ಐಎನ್ಎಸ್ ವಿಶಾಖಪಟ್ಟಣಂ’ ನಿಯೋಜನೆಗೆ ರವಿವಾರ ಇಲ್ಲಿಯ ಮಜಗಾಂವ್ ಡಾಕ್ನಲ್ಲಿ ವಿಧ್ಯುಕ್ತ ಚಾಲನೆ ನೀಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು, ಇಂಡೋ-ಪೆಸಿಫಿಕ್ (ಹಿಂದು ಮಹಾಸಾಗರದಿಂದ ಪೆಸಿಫಿಕ್ ಸಮುದ್ರದವರೆಗಿನ ಪ್ರದೇಶ) ಪ್ರಮುಖ ಮಾರ್ಗವಾಗಿದ್ದು, ವಿಶ್ವ ಆರ್ಥಿಕತೆಗೆ ಮಹತ್ವದ್ದಾಗಿದೆ ಮತ್ತು ಅದನ್ನು ಸುರಕ್ಷಿತವಾಗಿರಿಸುವುದು ಭಾರತೀಯ ನೌಕಾಪಡೆಯ ಪ್ರಾಥಮಿಕ ಉದ್ದೇಶವಾಗಿದೆ ಎಂದು ಹೇಳಿದರು. ‌

ಮುಂಬರುವ ವರ್ಷಗಳಲ್ಲಿ ಇಡೀ ಜಗತ್ತು ತನ್ನ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ ಮತ್ತು ರಕ್ಷಣಾ ಬಜೆಟ್ ಮೇಲಿನ ವೆಚ್ಚಗಳು ಹೆಚ್ಚಲಿವೆ. ನಾವು ದೇಶಿಯ ನೌಕಾ ನಿರ್ಮಾಣ ಕೇಂದ್ರದ ಅಭಿವೃದ್ಧಿಯತ್ತ ಸಾಗುತ್ತಿದ್ದೇವೆ ಎಂದ ಅವರು,ಭಾರತೀಯ ನೌಕಾಪಡೆಯು ಬೇಡಿಕೆ ಸಲ್ಲಿಸಿದ್ದ 41 ನೌಕೆಗಳ ಪೈಕಿ 38 ನೌಕೆಗಳನ್ನು ಭಾರತದಲ್ಲಿ ನಿರ್ಮಿಸಲಾಗಿದೆ. ಇದು ಸ್ವದೇಶಿಕರಣದ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.

ಪ್ರಾಜೆಕ್ಟ್ 15ಬಿ ಅಡಿ ನಿರ್ಮಾಣಗೊಂಡಿರುವ ಐಎನ್ಎಸ್ ವಿಶಾಖಪಟ್ಟಣಂ ಮೊದಲ ಗುಪ್ತ ನಿರ್ದೇಶಿತ ಕ್ಷಿಪಣಿ ವಿಧ್ವಂಸಕ ನೌಕೆಯಾಗಿದ್ದು, ಅದರ ನಿರ್ಮಾಣದಲ್ಲಿ ದೇಶಿಯ ಡಿಎಂಆರ್ 249ಎ ಉಕ್ಕನ್ನು ಬಳಸಲಾಗಿದೆ. ಒಟ್ಟು 163 ಮೀ.ಉದ್ದ ಮತ್ತು 7,400ಟನ್ಗೂ ಅಧಿಕ ತೂಕವನ್ನು ಹೊಂದಿರುವ ಈ ಹಡಗು ಭಾರತದಲ್ಲಿ ನಿರ್ಮಾಣಗೊಂಡ ಬೃಹತ್ ವಿಧ್ವಂಸಕ ನೌಕೆಗಳಲ್ಲೊಂದಾಗಿದೆ.
 
ನೌಕೆಯ ಶೇ.75ರಷ್ಟು ಭಾಗಗಳು ಸ್ವದೇಶಿ ನಿರ್ಮಿತವಾಗಿದ್ದು, ತನ್ಮೂಲಕ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಗಣನೀಯ ಕೊಡುಗೆಯನ್ನು ಸಲ್ಲಿಸಿದೆ. ಸಮುದ್ರಯುದ್ಧದಲ್ಲಿ ಬಹು ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ನೆಲದಿಂದ ನೆಲಕ್ಕೆ ಮತ್ತು ನೆಲದಿಂದ ಆಗಸಕ್ಕೆ ಚಿಮ್ಮಬಲ್ಲ ಧ್ವನಿವೇಗಾಧಿಕ ಕ್ಷಿಪಣಿಗಳು, ಮಧ್ಯಮ ಮತ್ತು ಅಲ್ಪವ್ಯಾಪ್ತಿಯ ಗನ್ಗಳು, ಜಲಾಂತರ್ಗಾಮಿ ನಿರೋಧಕ ರಾಕೆಟ್ಗಳು, ಆಧುನಿಕ ವಿದ್ಯುನ್ಮಾನ ಯುದ್ಧೋಪಕರಣಗಳು ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳು ಮತ್ತು ಸೆನ್ಸರ್ಗಳನ್ನು ನೌಕೆಯಲ್ಲಿ ಅಳವಡಿಸಲಾಗಿದೆ.
 
ಅನಿಲ ಮತ್ತು ಅನಿಲ ಸಂಚಾಲನೆಯ ಶಕ್ತಿಶಾಲಿ ಸಂಯೋಜನೆಯಿಂದ ಚಾಲಿತ ಈ ನೌಕೆಯು ಪ್ರತಿ ಗಂಟೆಗೆ 30 ನಾಟ್ಗಳಿಗೂ ಅಧಿಕ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಎರಡು ಹೆಲಿಕಾಪ್ಟರ್ಗಳನ್ನೂ ಇದು ಹೊಂದಿದೆ.

ಅತ್ಯಾಧುನಿಕ ಡಿಜಿಟಲ್ ನೆಟ್ವರ್ಕ್ ಗಳು,ಯುದ್ಧ ನಿರ್ವಹಣೆ ವ್ಯವಸ್ಥೆ ಮತ್ತು ಸಮಗ್ರ ಪ್ಲಾಟ್ಫಾರ್ಮ್ ಮ್ಯಾನೇಜ್ಮೆಂಟ್ ಸಿಸ್ಟಮ್ ನೊಂದಿಗೆ ನೌಕೆಯು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಸ್ವಯಂಚಾಲಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News