ಕೆಲವು ಹೊಣೆಗೇಡಿ ದೇಶಗಳಿಂದ ಸಮುದ್ರ ಕಾನೂನಿನ ತಪ್ಪು ವ್ಯಾಖ್ಯಾನ: ಚೀನಾ ವಿರುದ್ಧ ರಾಜನಾಥ್ ಪರೋಕ್ಷ ಟೀಕೆ

Update: 2021-11-21 16:19 GMT

ಮುಂಬೈ, ನ.21: ಕೆಲವು ಹೊಣೆಗೇಡಿ ದೇಶಗಳು ತಮ್ಮ ಸಂಕುಚಿತ ಪಕ್ಷಪಾತಿ ಹಿತಾಸಕ್ತಿಗಳು ಮತ್ತು ಪ್ರಾಬಲ್ಯ ಮೆರೆಯುವ ಪ್ರವೃತ್ತಿಗಳೊಂದಿಗೆ ಸಮುದ್ರ ಕಾನೂನು ಕುರಿತು ವಿಶ್ವಸಂಸ್ಥೆಯ ನಿರ್ಣಯ (ಯುಎನ್ಸಿಎಲ್ಒಎಸ್)ವನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರವಿವಾರ ಇಲ್ಲಿ ಚೀನಾವನ್ನು ಪರೋಕ್ಷವಾಗಿ ಟೀಕಿಸಿದರು.

ಬೆಳಿಗ್ಗೆ ಇಲ್ಲಿ ಭಾರತೀಯ ನೌಕಾಪಡೆಯ ಕ್ಷಿಪಣಿ ವಿಧ್ವಂಸಕ ನೌಕೆ ‘ಐಎನ್ಎಸ್ ವಿಶಾಖಪಟ್ಟಣಂ’ ಅನ್ನು ಕಾಯಾರಂಭಗೊಳಿಸಿ ಮಾತನಾಡುತ್ತಿದ್ದ ಸಿಂಗ್, ಕೆಲವು ದೇಶಗಳು ತಮ್ಮ ನಿರಂಕುಶ ತಪ್ಪು ವ್ಯಾಖ್ಯಾನಗಳಿಂದ ಯುಎನ್ಸಿಎಲ್ಒಎಸ್ ಅನ್ನು ಪದೇಪದೇ ದುರ್ಬಲಗೊಳಿಸುತ್ತಿರುವುದು ಕಳವಳದ ವಿಷಯವಾಗಿದೆ ಎಂದು ಹೇಳಿದರು.

ಚೀನಾ ತನ್ನ ಪ್ರಾದೇಶಿಕ ಜಲವಲಯ ಎಂದು ಹೇಳಿಕೊಳ್ಳುತ್ತಿರುವ ಸಮುದ್ರ ಪ್ರದೇಶದಲ್ಲಿ ವಿದೇಶಿ ಹಡಗುಗಳ ಪ್ರವೇಶವನ್ನು ನಿಯಂತ್ರಿಸಲು ಹೊಸ ಸಮುದ್ರ ನಿಯಮಗಳನ್ನು ತಂದಿದ್ದು,ಅವು ಈ ವರ್ಷದ ಸೆ.1ರಂದು ಜಾರಿಗೊಂಡಿವೆ. ಈ ನೂತನ ಕಾನೂನಿನಡಿ ವಿದೇಶಿ ಮಿಲಿಟರಿ ಮತ್ತು ವಾಣಿಜ್ಯ ಹಡಗುಗಳು ‘ಚೀನಿ ಪ್ರಾದೇಶಿಕ ಜಲವಲಯ’ದಲ್ಲಿ ತಮ್ಮನ್ನು ಚೀನಾದ ಮೇಲ್ವಿಚಾರಣೆಗೆ ಒಪ್ಪಿಸಿಕೊಳ್ಳುವುದು ಅಗತ್ಯವಾಗಿದೆ.

‘ಚೀನಾದ ಸಮುದ್ರ ಸಂಚಾರ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ’ ಹಡಗುಗಳು ತಮ್ಮ ಹೆಸರು,ಕರೆ ಚಿಹ್ನೆ, ಹಾಲಿ ಇರುವ ಸ್ಥಳ ಮತ್ತು ಮತ್ತು ಮುಂದೆ ತಲುಪುವ ಬಂದರು ಹಾಗೂ ಆಗಮನದ ಅಂದಾಜು ಸಮಯದ ವಿವರಗಳನ್ನು ಸಲ್ಲಿಸುವುದನ್ನು ನೂತನ ಕಾನೂನು ಅಗತ್ಯವಾಗಿಸಿದೆ. ಅಪಾಯಕಾರಿ ಸರಕುಗಳು ಮತ್ತು ಅತಿಭಾರದ ಸರಕುಗಳನ್ನು ಸಾಗಿಸುವ ಹಡಗುಗಳೂ ಈ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

ವಿಶೇಷವಾಗಿ ವಿವಾದಿತ ದಕ್ಷಿಣ ಚೀನಾ ಸಮುದ್ರ, ಪೂರ್ವ ಚೀನಾ ಸಮುದ್ರ ಮತ್ತು ತೈವಾನ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ ಈ ಕಾನೂನು ಮಹತ್ವದ್ದಾಗಿದ್ದು, ಇದು ಅಮೆರಿಕ ಮತ್ತು ಪ್ರದೇಶದಲ್ಲಿಯ ಅದರ ಪಾಲುದಾರ ದೇಶಗಳು ಹಾಗೂ ಚೀನಾ ನಡುವೆ ಉದ್ವಿಗ್ನತೆ ಹೆಚ್ಚಲು ಕಾರಣವಾಗಿದೆ.

ವಿದೇಶಿ ಹಡಗುಗಳು ದೇಶದ ಭದ್ರತೆಗೆ ಬೆದರಿಕೆಯೊಡ್ಡದಿದ್ದರೆ ಅವುಗಳ ಸಂಚಾರದ ಹಕ್ಕಿಗೆ ಕರಾವಳಿ ದೇಶಗಳು ಅಡ್ಡಿಯನ್ನುಂಟು ಮಾಡುವಂತಿಲ್ಲ ಎಂದು ಯುಎನ್ಸಿಎಲ್ಒಎಸ್ ಖಾತರಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News