×
Ad

ಬುಂದೇಲಖಂಡದ್ದೆಂದು ಹೇಳಿ ಶ್ರೀಶೈಲಂ ಅಣೆಕಟ್ಟಿನ ಚಿತ್ರ ಶೇರ್ ಮಾಡಿಕೊಂಡ ಬಿಜೆಪಿ ನಾಯಕರು!

Update: 2021-11-23 16:55 IST

ಹೊಸದಿಲ್ಲಿ, ನ.23: ಬಿಜೆಪಿ ನಾಯಕರು ಬುಂದೇಲಖಂಡದ್ದೆಂದು ಹೇಳಿಕೊಂಡು ದಕ್ಷಿಣ ಭಾರತದ ಶ್ರೀಶೈಲಂ ಅಣೆಕಟ್ಟಿನ ಚಿತ್ರವನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿಕೊಂಡಿರುವುದನ್ನು ಸುದ್ದಿ ಜಾಲತಾಣ Alt News ಬಯಲಿಗೆಳೆದಿದೆ.

ನ.19ರಿಂದ ನ.21ರವರೆಗೆ ಮೂರು ದಿನಗಳ ಕಾಲ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಬುಂದೇಲಖಂಡ ಪ್ರದೇಶದಲ್ಲಿನ 6,000 ಕೋ.ರೂ. ವೆಚ್ಚದ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದ್ದರು ಮತ್ತು ಪ್ರಕಟಿಸಿದ್ದರು.

ಬಿಜೆಪಿ ಶಾಸಕರಾದ ರವೀಂದ್ರನಾಥ ತ್ರಿಪಾಠಿ ಮತ್ತು ಸುರೇಶಕುಮಾರ್ ಖನ್ನಾ, ಬಿಜೆಪಿ ಸದಸ್ಯ ಅನಿಲ್ ಕುಮಾರ್ ಮತ್ತು ಗುಜರಾತಿನ ಹಿಂದು ಯುವವಾಹಿನಿಯ ಮುಖ್ಯಸ್ಥ ಯೋಗಿ ದೇವನಾಥ ‘ಬುಂದೇಲಖಂಡ ಅಣೆಕಟ್ಟಿನ ’ ಚಿತ್ರವನ್ನು ಶೇರ್ ಮಾಡಿಕೊಂಡಿದ್ದರು. ಮೂರು ಲಕ್ಷ ಫಾಲೋವರ್ಗಳನ್ನು ಹೊಂದಿರುವ ‘ನರೇಂದ್ರ ಮೋದಿ ಫಾರ್ ಪಿಎಂ’ ಫೇಸ್ಬುಕ್ ಪೇಜ್ ಕೂಡ ಅದನ್ನು ಶೇರ್ ಮಾಡಿತ್ತು.

ಅಸಲಿಗೆ ಬಿಜೆಪಿ ನಾಯಕರು ಶೇರ್ ಮಾಡಿಕೊಂಡಿರುವ ಚಿತ್ರವು 2014ರಲ್ಲಿ ‘ಡೆಕ್ಕನ್ ಕ್ರಾನಿಕಲ್’ ದೈನಿಕದಲ್ಲಿ ಪ್ರಕಟವಾಗಿತ್ತು ಮತ್ತು ಈ ಚಿತ್ರವು ಶ್ರೀಶೈಲಂ ಅಣೆಕಟ್ಟಿನದ್ದಾಗಿದೆ ಎನ್ನುವುದನ್ನು Alt News ಪತ್ತೆ ಹಚ್ಚಿದೆ. ಈ ಅಣೆಕಟ್ಟನ್ನು ಕೃಷ್ಣಾ ನದಿಗೆ ಅಡ್ಡವಾಗಿ ತೆಲಂಗಾಣದ ನಗರಕರ್ನೂಲ ಜಿಲ್ಲೆ ಮತ್ತು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಗಳಲ್ಲಿ ನಿರ್ಮಿಸಲಾಗಿದೆ.

ಫೇಸ್ಬುಕ್ನಲ್ಲಿ ಶೇರ್ ಮಾಡಿರುವ ಮತ್ತು ಡೆಕ್ಕನ್ ಕ್ರಾನಿಕಲ್ ಪ್ರಕಟಿಸಿದ್ದ ಚಿತ್ರಗಳು ಒಂದೇ ಆಗಿವೆ. ಮೋದಿ ಘೋಷಿಸಿರುವ ಯೋಜನೆಗಳಲ್ಲಿ ಅರ್ಜುನ ಸಹಾಯಕ ಯೋಜನೆ,ರಾಟೌಲಿ ವಿಯರ್ ಯೋಜನೆ, ಭವಾನಿ ಅಣೆಕಟ್ಟು ಯೋಜನೆ ಮತ್ತು ಮಜಗಾಂವ್-ಚಿಲ್ಲಿ ಸ್ಪ್ರಿಂಕ್ಲರ್ ಯೋಜನೆಗಳು ಸೇರಿವೆ ಎಂದು ನ.19ರಂದು ಪಿಎಂ ಇಂಡಿಯಾ ವೆಬ್ಸೈಟ್ನಲ್ಲಿಯ ಹೇಳಿಕೆಯು ತಿಳಿಸಿತ್ತು. ಇದರ ಬೆನ್ನಿಗೇ ಹಲವಾರು ಬಿಜೆಪಿ ನಾಯಕರು ಶ್ರೆಶೈಲಂ ಅಣೆಕಟ್ಟಿನ ಚಿತ್ರವನ್ನು ಪೋಸ್ಟ್ ಮಾಡಿ,ಇದು ಬುಂದೇಲಖಂಡಕ್ಕೆ ಪ್ರಧಾನಿಯ ಉಡುಗೊರೆಯಾಗಿದೆ ಎಂದು ಹೇಳಿಕೊಂಡಿದ್ದರು.

ಕೃಪೆ: Altnews.in

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News