ಜಿಎಸ್‌ಟಿ ಶೇ. 5ರಿಂದ ಶೇ. 12ಕ್ಕೆ ಏರಿಕೆ: ದುಬಾರಿಯಾಗಲಿರುವ ಬಟ್ಟೆ, ಪಾದರಕ್ಷೆಗಳು
ಹೊಸದಿಲ್ಲಿ: ಬಟ್ಟೆಬರೆಗಳು ಹಾಗೂ ಪಾದರಕ್ಷೆಗಳಿಗೆ ಜನವರಿ 1, 2022ರಿಂದ ಸಮಾನ ಶೇ. 12ರಷ್ಟು ಜಿಎಸ್‌ಟಿ ವಿಧಿಸಲು ಕೇಂದ್ರ ಸರಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಎರಡೂ ಉತ್ಪನ್ನಗಳ ಬೆಲೆಯೇರಿಕೆಯಾಗಲಿದೆ. ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ನವೆಂಬರ್ 18ರಿಂದ ಜಿಎಸ್‌ಟಿ ಏರಿಕೆ ಕುರಿತು ಸೂಚನೆ ನೀಡಿದೆ ಎಂದು thenewsminute.com ವರದಿ ಮಾಡಿದೆ.
ಈ ಎರಡೂ ಉತ್ಪನ್ನಗಳ ತಯಾರಿಗೆ ಬೇಕಾಗಿರುವ ಕಚ್ಛಾ ವಸ್ತುಗಳ ಮೇಲಿನ ತೆರಿಗೆ ಅಂತಿಮ ಉತ್ಪನ್ನದ ಮೇಲಿನ ತೆರಿಗೆಗಿಂತ ಹೆಚ್ಚಾಗಿದೆ.
ಬಟ್ಟೆಬರೆಗಳ ಮೇಲಿನ ಜಿಎಸ್‌ಟಿ ಶೇ 5ರಿಂದ ಶೇ 12ಕ್ಕೆ ಏರಿಕೆಯಾಗಿದೆ. ಈ ಹಿಂದೆ ರೂ. 1000ಕ್ಕಿಂತ ಕಡಿಮೆ ಬೆಲೆಯ ಪಾದರಕ್ಷೆಗಳ ಮೇಲೆ ಶೇ. 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದರೆ ಮುಂದಿನ ವರ್ಷದಿಂದ ಯಾವುದೇ ಬೆಲೆಯ ಪಾದರಕ್ಷೆ ಮೇಲೆ ಶೇ. 12ರಷ್ಟು ಜಿಎಸ್‌ಟಿ ಪಾವತಿಸಬೇಕಿದೆ.
ಎಲ್ಲಾ ರೀತಿಯ ಫ್ಯಾಬ್ರಿಕ್‌ಗಳಾದ ಸಿಲ್ಕ್, ಕಾಟನ್, ಉಣ್ಣೆ, ಸೆಣಬು ಇವುಗಳ ಮೇಲೆ ಶೇ 12ರಷ್ಟು ಜಿಎಸ್‌ಟಿ ಇದ್ದರೆ ಸಿಂಥಟಿಕ್ ಫೈಬರ್ ಯಾರ್ನ್ ಮೇಲಿನ ಜಿಎಸ್‌ಟಿ ಅನ್ನು ಶೇ 12ಗೆ ಕಡಿಮೆಗೊಳಿಸಲಾಗಿದೆ.
ಕೇಂದ್ರ ಸರಕಾರದ ನಿರ್ಧಾರದಿಂದ ತಮಗೆ ಆಘಾತವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದ ಪತ್ರದಲ್ಲಿ ರಿಟೇಲರ‍್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಹೇಳಿದೆ. ದೇಶದಲ್ಲಿ ಕೃಷಿ ನಂತರ ಹೆಚ್ಚು ಆದಾಯ ತರುವ ವಸ್ತುವಾದ ಬಟ್ಟೆಬರೆಗಳ ಮೇಲೆ ಶೇ. 12ರಷ್ಟು ತೆರಿಗೆ ಸಮರ್ಥನೀಯವಲ್ಲ ಎಂದು ಅಸೋಸಿಯೇಶನ್ ಹೇಳಿದೆ.
"ಈಗಾಗಲೇ ಸಾಕಷ್ಟು ಸಮಸ್ಯೆಯಿರುವ ಈ ಕ್ಷೇತ್ರದ ಮೇಲೆ ಜಿಎಸ್‌ಟಿ ಶೇ 12ರಷ್ಟು ಇನ್ನಷ್ಟು ಹೊರೆ ಸೃಷ್ಟಿಸಲಿದೆ. ಬೆಲೆ ಹೆಚ್ಚಾದಂತೆ ಬೇಡಿಕೆ ಕೂಡ ಕಡಿಮೆಯಾಗಲಿದೆ. ಮುಂದೆ ಇದರಿಂದಾಗಿ ಹಲವು ಅಸಂಘಟಿತ ವಲಯದ ಉದ್ಯಮಗಳು ಜಿಎಸ್‌ಟಿ ಪರಿಧಿಯ ಹೊರಗೆ ಹೋಗಬಹುದು,'' ಎಂದು ಅಸೋಸಿಯೇಶನ್ ಸಿಇಒ ಕುಮಾರ್ ರಾಜಗೋಪಾಲನ್ ಹೇಳಿದ್ದಾರೆ ಎಂದು ವರದಿಯಾಗಿದೆ.