ಪ್ರಮುಖ ಸುದ್ದಿವಾಹಿನಿಗಳ ಸಂಪಾದಕರೊಂದಿಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸಭೆ: ವರದಿ

Update: 2021-11-24 14:30 GMT
Photo: newslaundry

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಗ್ರೇಟರ್ ನೋಯ್ಡಾದಲ್ಲಿ ಮಂಗಳವಾರ ಬಹಳ ಮಹತ್ವದ ಸಭೆಯನ್ನು ನಡೆಸಿದರು.

ಸಭೆಯಲ್ಲಿ ಪಶ್ಚಿಮ ಉತ್ತರ ಪ್ರದೇಶದ ಆರೆಸ್ಸೆಸ್ ನ ಪ್ರಾದೇಶಿಕ ಮುಖ್ಯಸ್ಥ ಸೂರ್ಯ ಪ್ರಕಾಶ್ ಟೋಂಕ್, ಅದರ ರಾಷ್ಟ್ರೀಯ ಸಂವಹನ ಮುಖ್ಯಸ್ಥ ರಾಮ್ ಲಾಲ್ ಹಾಗೂ ಪ್ರಮುಖ ಸುದ್ದಿ ವಾಹಿನಿಗಳ ಸಂಪಾದಕರು ಉಪಸ್ಥಿತರಿದ್ದರು ಎಂದು newslaundry ವರದಿ ಮಾಡಿದೆ.

ಸುದರ್ಶನ ನ್ಯೂಸ್ ಸಂಪಾದಕ ಸುರೇಶ್ ಚವ್ಹಾಂಕೆ, ಆಜ್ ತಕ್ ಕಾರ್ಯನಿರ್ವಾಹಕ ಸಂಪಾದಕ ಹಾಗೂ ನಿರೂಪಕ ಸಯೀದ್ ಅನ್ಸಾರಿ, ನೆಟ್ವರ್ಕ್ 18 ಗ್ರೂಪ್ ಮ್ಯಾನೇಜಿಂಗ್ ಎಡಿಟರ್ ಬ್ರಿಜೇಶ್ ಕುಮಾರ್ ಸಿಂಗ್, ಎಬಿಪಿ ನ್ಯೂಸ್ ಉಪಾಧ್ಯಕ್ಷ(ನ್ಯೂಸ್, ಪ್ರೊಡಕ್ಷನ್) ಸುಮಿತ್ ಅವಸ್ಥಿ, ಎಬಿಪಿ ನ್ಯೂಸ್  ನಿರೂಪಕ ವಿಕಾಸ್ ಭದೌರಿಯಾ, ಇಂಡಿಯಾ ಟುಡೇ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಮತ್ತು ನಿರೂಪಕ ಗೌರವ್ ಸಾವಂತ್, ನ್ಯೂಸ್ 24 ಸಂಪಾದಕಿ ಅನುರಾಧಾ ಪ್ರಸಾದ್, ಇಂಡಿಯಾ ಟುಡೇ ಗ್ರೂಪ್ ನ್ಯೂಸ್ ನಿರ್ದೇಶಕಿ ಸುಪ್ರಿಯಾ ಪ್ರಸಾದ್ ಹಾಗೂ  ಟೈಮ್ಸ್ ನೆಟ್ವರ್ಕ್ ಸಮೂಹ ಸಂಪಾದಕ ನಾವಿಕ ಕುಮಾರ್ ಸಭೆಯಲ್ಲಿ ಭಾಗವಹಿಸಿರುವ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ.

ಸಭೆಯಲ್ಲಿ ಭಾಗವಹಿಸಿದ್ದ ಸುಮಾರು ಎಂಟು ಪತ್ರಕರ್ತರನ್ನು newslaundry ಸಂಪರ್ಕಿಸಿದೆ. ಕೆಲವರು ಕರೆಗಳನ್ನು ಸ್ವೀಕರಿಸಲಿಲ್ಲ, ಇತರರು ಸಭೆಯಲ್ಲಿ ಹಾಜರಾಗಿದ್ದನ್ನು ನಿರಾಕರಿಸಿದರು, ಆದರೆ ಕೆಲವರು ಸಭೆಯಲ್ಲಿ ಏನಾಯಿತು ಎಂದು ತಿಳಿಸಿದ್ದಾರೆಂದು newslaundry ವರದಿ ಮಾಡಿದೆ.

ಗ್ರೇಟರ್ ನೋಯ್ಡಾದಲ್ಲಿ ಸಭೆ ನಡೆದಿದ್ದು, ಅಲ್ಲಿ ಆರೆಸ್ಸೆಸ್ ಬಗ್ಗೆ ಸಾಮಾನ್ಯ ಚರ್ಚೆ ನಡೆದಿದೆ ಎಂದು ಸುಪ್ರಿಯಾ ಪ್ರಸಾದ್ newslaundryಗೆ ಖಚಿತಪಡಿಸಿದ್ದಾರೆ. "ಸಭೆಯಲ್ಲಿ ಇನ್ನೂ ಅನೇಕ ಜನರು ಇದ್ದರು" ಎಂದು ಅವರು ಹೇಳಿದರು.

ಸಯೀದ್ ಅನ್ಸಾರಿ ಅವರು ಫೋಟೊದಲ್ಲಿ ಕಾಣಿಸಿಕೊಂಡಿದ್ದರೂ, ಇತರ ಪತ್ರಕರ್ತರು ಅನ್ಸಾರಿ ಅವರು ಅಲ್ಲಿಗೆ ಬಂದಿದ್ದಾರೆ ಎಂದು ದೃಢಪಡಿಸಿದರೂ ಸಭೆ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

"ಅಂತಹ ಸಭೆ ನಡೆದಿದೆ ಎಂದು ನಿಮಗೆ ಯಾರು ಹೇಳಿದರು. ಅಂತಹ ಯಾವುದೇ ಸಭೆ ನಡೆದಿಲ್ಲ ಹಾಗೂ ನಾನು ಅಂತಹ ಯಾವುದೇ ಸಭೆಯಲ್ಲಿ ಭಾಗವಹಿಸಿಲ್ಲ. ಇದು ದೇಶವಿರೋಧಿ ಸಭೆಯಲ್ಲ, ಹಾಗಾದರೆ ನೀವು ಯಾಕೆ ವಿಚಾರಿಸುತ್ತಿದ್ದೀರಿ?ಎಂದು ಸುರೇಶ್ ಚವ್ಹಾಂಕೆ ಪ್ರಶ್ನಿಸಿದ್ದಾರೆ.

"ಇದು ಸಾಮಾನ್ಯ ಸಭೆಯಾಗಿತ್ತು. ಮಾತುಕತೆಗೆ ಯಾವುದೇ ಅಜೆಂಡಾ ಇರಲಿಲ್ಲ. ಭಾಗವತ್ ಅವರು ವರ್ಷಕ್ಕೊಮ್ಮೆ ಮಾಧ್ಯಮದವರನ್ನು ಭೇಟಿ ಮಾಡುತ್ತಾರೆ. ಇದರಿಂದ ಜನರು ಆರೆಸ್ಸೆಸ್ ಅನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಬಹುದು" ಎಂದು ಸಭೆಯಲ್ಲಿ ಭಾಗವಹಿಸಿದ್ದ ಎಬಿಪಿ ನ್ಯೂಸ್ನ ವಿಕಾಸ್ ಭದೌರಿಯಾ newslaundry ಗೆ ತಿಳಿಸಿದರು.

"ಮಾಧ್ಯಮಗಳು ಸಕಾರಾತ್ಮಕ ಸುದ್ದಿಗಳ ಮೇಲೆ ಹೆಚ್ಚು ಗಮನಹರಿಸಬೇಕು. ಮಾಧ್ಯಮಗಳು ಸಕಾರಾತ್ಮಕ ಸುದ್ದಿಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಬಹುದು ಎಂದು ಭಾಗವತ್ ಹೇಳಿದರು. ಅವರು ಒಂದು ಸುದ್ದಿಯ ಉದಾಹರಣೆಯನ್ನು ಕೂಡ ನೀಡಿದರು, ಅದು ನನಗೆ ಈಗ ನೆನಪಿಲ್ಲ” ಎಂದು ಭದೌರಿಯಾ ಹೇಳಿದರು.

ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ಚರ್ಚೆ ನಡೆದಿದೆಯೇ? ಎಂಬ ಪ್ರಶ್ನೆಗೆ ಹೆಚ್ಚೇನೂ ಇಲ್ಲ ಎಂದು ಭದೌರಿಯಾ ಹೇಳಿದರು.

''ಸಭೆಯಲ್ಲಿ ಆರೆಸ್ಸೆಸ್ ಕುರಿತು ಚರ್ಚೆ ನಡೆದಿತ್ತು. ಚರ್ಚೆಯಲ್ಲಿ ಸುದ್ದಿಯಾಗುವಂಥದ್ದೇನೂ ಇರಲಿಲ್ಲ. ತುಸು ಸಂಪರ್ಕದಲ್ಲಿರುವ ಪತ್ರಕರ್ತರನ್ನು ಚರ್ಚೆಗೆ ಕರೆಯಲಾಗಿತ್ತು. ಮಾಧ್ಯಮವು ದೊಡ್ಡದಾಗಿದೆ. ಆದರೆ ಆರೆಸ್ಸೆಸ್ ಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಸೀಮಿತ ಜನರೊಂದಿಗೆ ಚರ್ಚಿಸಲಾಗಿದೆ” ಎಂದು ಆರೆಸ್ಸೆಸ್ ನ ಪ್ರಾದೇಶಿಕ ಮುಖ್ಯಸ್ಥ ಸೂರ್ಯ ಪ್ರಕಾಶ್ ಟೋಂಕ್ ಹೇಳಿದರು.

ಭಾಗವತ್ ಪತ್ರಕರ್ತರೊಂದಿಗೆ ಸಂವಾದ ನಡೆಸುವುದು ಹೊಸದೇನಲ್ಲ. ಕಳೆದ ಡಿಸೆಂಬರ್ನಲ್ಲಿ ಅವರು ದಿಲ್ಲಿಯಲ್ಲಿ ಪ್ರಸಿದ್ಧ ದಿನಪತ್ರಿಕೆಗಳ 52 ಸಂಪಾದಕರು ಹಾಗೂ  ಸುದ್ದಿವಾಹಿನಿಗಳ ನಿರೂಪಕರನ್ನು ಭೇಟಿಯಾಗಿದ್ದರು, ನಂತರ ಮುಂಬೈನಲ್ಲಿ ಪ್ರಮುಖ ಪತ್ರಿಕೆಗಳ 18 ಸಂಪಾದಕರನ್ನು ಭೇಟಿಯಾಗಿದ್ದರು. ಸೆಪ್ಟೆಂಬರ್ 2019 ರಲ್ಲಿ ಅವರು ದಿಲ್ಲಿಯಲ್ಲಿ 30 ದೇಶಗಳ 80 ಪತ್ರಕರ್ತರನ್ನು ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News