ಪೆಗಾಸಸ್ ಸ್ಪೈವೇರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಆ್ಯಪಲ್

Update: 2021-11-24 16:40 GMT

ಹೊಸದಿಲ್ಲಿ,ನ.24: ಭಾರತ ಸೇರಿದಂತೆ ಜಗತ್ತಿನಾದ್ಯಂತ ವಿವಿಧ ರಾಷ್ಟ್ರಗಳ ಸರಕಾರಗಳು ಸಾವಿರಾರು ಪತ್ರಕರ್ತರ,ಸಾಮಾಜಿಕ ಹೋರಾಟಗಾರರ ಹಾಗೂ ರಾಜಕಾರಣಿಗಳ ಖಾಸಗಿ ಸಂದೇಶಗಳ ಬಗ್ಗೆ ಬೇಹುಗಾರಿಕೆ ನಡೆಸಲು ಬಳಸುತ್ತಿವೆಯೆನ್ನಲಾದ ಪೆಗಾಸಸ್ ಸ್ಪೈವೇರನ್ನು ಅಭಿವೃದ್ಧಿಪಡಿಸಿರುವ ಇಸ್ರೇಲಿ ಸಂಸ್ಥೆ ಎನ್‌ಎಸ್‌ಓ ಸಮೂಹದ ವಿರುದ್ಧ ಆ್ಯಪಲ್ ಕಂಪೆನಿಯು ಮಂಗಳವಾರ ಮೊಕದ್ದಮೆ ಹೂಡಿದೆ.

ಸರಕಾರವು ಬಳಸುತ್ತಿರುವ ಪೆಗಾಸಸ್ ಸ್ಪೈವೇರ್ ಅಕ್ರಮವಾಗಿ ನಾಗರಿಕರ ಮೇಲೆ ಗೂಢಚರ್ಯೆ ನಡೆಸುತ್ತಿದೆಯೆಂಬ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಭಾರತದ ಸುಪ್ರೀಂಕೋರ್ಟ್ ಆದೇಶಿಸಿದ ಬಳಿಕ ಆ್ಯಪಲ್ ಕಂಪೆನಿಯು ಅಮೆರಿಕದಲ್ಲಿ ಎನ್‌ಎಸ್‌ಓ ಗ್ರೂಪ್ ವಿರುದ್ಧ ನ್ಯಾಯಾಲಯದ ಮೆಟ್ಟಲೇರಿದೆ.

ಜಗತ್ತಿನಾದ್ಯಂತ ಬಳಕೆಯಲ್ಲಿರುವ 165 ಕೋಟಿಗೂ ಅಧಿಕ ಐಫೋನ್‌ಗಳಲ್ಲಿ ಪೆಗಾಸಸ್ ಸ್ಪೈವೇರ್ ಅಳವಡಿಸದಂತೆ ಎನ್‌ಎಸ್‌ಓ ಗ್ರೂಪ್‌ಗೆ ಆದೇಶಿಸಬೇಕೆಂದು ಕೋರಿ ಅಮೆರಿಕದ ಮೂಲದ ಇಲೆಕ್ಟ್ರಾನಿಕ್ ಉತ್ಪನ್ನಗಳ ದಿಗ್ಗಜ ಸಂಸ್ಥೆಯಾದ ಆ್ಯಪಲ್ , ಕ್ಯಾಲಿಫೋರ್ನಿಯಾದ ಫೆಡರಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆಯೆಂದು ಮೂಲಗಳು ತಿಳಿಸಿವೆ.

 ಆ್ಯಪಲ್ ಕಂಪೆನಿಯು 2018ರಲ್ಲಿ ಆ್ಯಪಲ್ ಕಂಪೆನಿಯು 10.70 ಲಕ್ಷ ಮೊಬೈಲ್ ಫೋನ್‌ಗಳನ್ನು ರಫ್ತು ಮಾಡಿದ್ದರೆ 2020ರಲ್ಲಿ ಅದು ರಫ್ತು ಮಾಡಿದ ಮೊಬೈಲ್ ಫೋನ್‌ಗಳ ಸಂಖ್ಯೆ 30.20 ಲಕ್ಷಕ್ಕೇರಿತ್ತು. ಇತರ ಎಲ್ಲಾ ಮೊಬೈಲ್ ಸಾಧನಗಳಿಗಿಂತ (ಉದಾ: ಆ್ಯಂಡ್ರಾಯ್ಡ್ ಬಳಕೆಯ ಫೋನ್‌ಗಳು) ಆ್ಯಪಲ್ ಮೊಬೈಲ್ ಫೋನ್‌ಗಳನ್ನೇ ಹೆಚ್ಚಾಗಿ ಗುರಿಯಿರಿಸಿವೆ ಎಂಬುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ.

ಆ್ಯಪಲ್‌ನ ಯಾವುದೇ ಸಾಫ್ಟ್‌ವೇರ್, ಸೇವೆಗಳು ಹಾಗೂ ಸಾಧನಗಳನ್ನು ಬಳಸಿಕೊಳ್ಳುವುದಕ್ಕೆ ಖಾಯಂ ತಡೆಯಾಜ್ಞೆ ತರಬೇಕೆಂದು ಐಫೋನ್ ತಯಾರಕ ಸಂಸ್ಥೆಯು ಮನವಿಯನ್ನು ಸಲ್ಲಿಸಿದೆ. ‘ ಪೆಗಾಸಸ್ ಸ್ಪೈವೇರ್ ಅಭಿವೃದ್ಧಿಪಡಿಸಿರುವ ಸಂಸ್ಥೆಯಾದ ಎನ್‌ಎಸ್‌ಓ ಗ್ರೂಪ್ ಕುಖ್ಯಾತ ಹ್ಯಾಕರ್ ಆಗಿದ್ದು, ಅತ್ಯಾಧುನಿಕ ಸೈಬರ್ ಬೇಹುಗಾರಿಕೆ ವ್ಯವಸ್ಥೆಯನ್ನು ಸೃಷ್ಚಿಸಿರುವ 21ನೇ ಶತಮಾನದ ನೀತಿಭ್ರಷ್ಠ ಬಾಡಿಗೆ ಹಂತಕರಿವರು’ ಎಂದು ಅದು ಅರ್ಜಿಯಲ್ಲಿ ಕಟುವಾಗಿ ಹೇಳಿದೆ.

ಬಿಜೆಪಿಯನ್ನು ವಿರೋಧಿಸುವ ಹಾಗೂ ಟೀಕಿಸುವ ಹಲವಾರು ಪ್ರತಿಪಕ್ಷ ನಾಯಕರು ಹಾಗೂ ಪತ್ರಕರ್ತರ ಫೋನ್ ಸಂಖ್ಯೆಗಳನ್ನು ಪೆಗಾಸಸ್ ಸ್ಪೈವೇರ್ ಮೂಲಕ ಹ್ಯಾಕಿಂಗ್‌ಗೆ ಗುರಿ ಮಾಡಲಾಗಿದೆ ಎಂದು ‘ದಿ ವೈರ್’ ಆನ್‌ಲೈನ್ ಸುದ್ದಿಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳ ಗುಂಪೊಂದು ಬಹಿರಂಗಪಡಿಸಿದ ಬೆನ್ನಲ್ಲೇ ಪೆಗಾಸಸ್ ಹಗರಣ ದೇಶದಲ್ಲಿ ಭಾರೀ ಕೋಲಾಹಲವನ್ನು ಉಂಟು ಮಾಡಿತ್ತು. ಸಂಸತ್‌ನ ಉಭಯ ಸದನಗಳಲ್ಲಿಯೂ ಪೆಗಾಸಸ್ ಬಗ್ಗೆ ಕಾವೇರಿದ ಚರ್ಚೆ ನಡೆದು, ಹಲವು ದಿನಗಳ ಕಾಲ ಉಭಯ ಸದನಗಳಲ್ಲಿ ಕಲಾಪ ಅಸ್ತವ್ಯಸ್ತಗೊಂಡಿತ್ತು.

ಕಾಂಗ್ರೆಸ್ ಸಂಸದ ರಾಹುಲ್‌ಗಾಂಧಿ, ಚುನಾವಣಾ ವ್ಯೆಹ ತಜ್ಞ ಪ್ರಶಾಂತ್ ಕಿಶೋರ್ ಹಾಗೂ ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಾಧೀಶ ಮತ್ತು ರಾಷ್ಟ್ರೀಯ ಭದ್ರತಾ ಏಜೆನ್ಸಿಗಳ ಹಾಲಿ ಮತ್ತು ಮಾಜಿ ವರಿಷ್ಠರು ಪೆಗಾಸಸ್ ಸ್ಪೈವೇರ್ ಮೂಲಕ ಹ್ಯಾಕಿಂಗ್‌ಗೆ ಒಳಗಾದವರ ಪಟ್ಟಿಯಲ್ಲಿದ್ದಾರೆಂದು ವರದಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News