ಲೋನಿ ‘ಎನ್‌ಕೌಂಟರ್’ ಪ್ರಕರಣದ ಪೊಲೀಸ್ ತನಿಖೆಗೆ ಸಂಘಪರಿವಾರ, ಬಿಜೆಪಿ ಮುಖಂಡರ ವಿರೋಧ

Update: 2021-11-24 17:41 GMT
photo:The Wire

ಹೊಸದಿಲ್ಲಿ,ನ.24: ಉತ್ತರಪ್ರದೇಶದ ಗಾಝಿಯಾಬಾದ್ ಜಿಲ್ಲೆಯಲ್ಲಿ ಏಳು ಮಂದಿ ಮುಸ್ಲಿಮರಿಗೆ ಗುಂಡಿಕ್ಕಿದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ    ಲೋನಿ ಪೊಲೀಸ್ ಠಾಣಾಧಿಕಾರಿ ರಾಜೇಂದ್ರ ತ್ಯಾಗಿ ಅವರನ್ನು ಅಮಾನತುಗೊಳಿಸಿರುವುದನ್ನು ಸಂಘಪರಿವಾರದ ನಾಯಕರು ಹಾಗೂ ಬಿಜೆಪಿಯ ಕೆಲವು ಹಿರಿಯ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಅಕ್ರಮವಾಗಿ ಗೋವು ಮಾರಾಟ ಮಾಡುತ್ತಿದ್ದಾರೆಂಬ ಆರೋಪದಲ್ಲಿ ಈ ಏಳು ಮಂದಿಯನ್ನು ರಾಜೇಂದ್ರ ತ್ಯಾಗಿ ನೇತೃತ್ವದ ಪೊಲೀಸ್ ತಂಡವು ಮೊಣಕಾಲ ಕೆಳಗೆ ಗುಂಡು ಹಾರಿಸಿ ಗಾಯಗೊಳಿಸಿತ್ತು ಹಾಗೂ ಆನಂತರ ಅವರನ್ನು ವಶಕ್ಕೆ ತೆಗೆದುಕೊಂಡಿತ್ತು. ಲೋನಿ ಠಾಣಾ ಪೊಲೀಸರು ಗುಂಡಿಕ್ಕಿದ ಏಳು ಮಂದಿಯಲ್ಲಿ ಒಬ್ಬಾತ 16 ವರ್ಷದ ಬಾಲಕನೂ ಇದ್ದನೆಂದು ಲೋನಿ ವೃತ್ತ ಪೊಲೀಸ್ ಅಧಿಕಾರಿ (ಸಿಓ) ರಾಜೇಂದ್ರ ಕುಮಾರ್ ಅವರು ನವೆಂಬರ್ 21ರಂದು ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದರು.

ಠಾಣಾಧಿಕಾರಿ ರಾಜೇಂದ್ರ ತ್ಯಾಗಿ ಹಾಗೂ ಅವರ ತಂಡವು ಬಾಲಕನ ವಯಸ್ಸನ್ನು ದೃಢಪಡಿಸಿಕೊಳ್ಳುವಲ್ಲಿ ನಿರ್ಲಕ್ಷ್ಯವನ್ನು ತೋರಿತ್ತೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನವೆಂಬರ್ 12ರಂದು ತನ್ನ ವರ್ಗಾವಣೆಯಾಗಿರುವುದು ತ್ಯಾಗಿಗೆ ತಿಳಿದುಬಂದಿತ್ತು. ಈ ‘ಎನ್‌ಕೌಂಟರ್’ ಕಾರಣದಿಂದಾಗಿಯೇ ತನ್ನ ವರ್ಗಾವಣೆಯಾಗಿದೆ. ಇದರಿಂದಾಗಿ ತನ್ನ ನೈತಿಕಸ್ಥೈರ್ಯ ಕುಸಿದಿದೆ ಎಂದವರು ಪೊಲೀಸ್ ಜನರಲ್ ಡೈರಿಯಲ್ಲಿ ಟಿಪ್ಪಣಿ ಬರೆದಿದ್ದರು ಮತ್ತು ಅದನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದರು. ಅವರ ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆನಂತರ ಗಾಝಿಯಾಬಾದ್‌ನ ಹಿರಿಯ ಪೊಲೀಸ್ ಅಧೀಕ್ಷಕ ಪವನ್ ಕುಮಾರ್ ಎನ್‌ಕೌಂಟರ್ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದರು. ಅಧಿಕೃತ ಗೌಪ್ಯತಾ ಕಾಯ್ದೆಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News