×
Ad

ಮಾಲೆಂಗಾವ್ ಸ್ಫೋಟ ಪ್ರಕರಣ ಎಲ್ಲಾ ಸಮನ್ಸ್ ಗೂ ಹಾಜರಾಗುವಂತೆ ಪ್ರಜ್ಞಾ ಠಾಕೂರ್‌ಗೆ ನಿರ್ದೇಶ

Update: 2021-11-24 23:18 IST

ಮುಂಬೈ, ನ. 24: ಮಾಲೆಂಗಾವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸಮನ್ಸ್ ಕಳುಹಿಸಿದಾಗಲೆಲ್ಲ ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್‌ಗೆ ಮುಂಬೈ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯ ಬುಧವಾರ ನಿರ್ದೇಶಿಸಿದೆ. ಠಾಕೂರ್ ಕೊನೆಯದಾಗಿ ಕಳೆದ ಜನವರಿಯಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಅನಂತರ ಪ್ರಕರಣದ ಹಲವು ವಿಚಾರಣೆಗಳಿಗೆ ಗೈರು ಹಾಜರಾಗಿದ್ದರು. ನ್ಯಾಯಾಲಯಕ್ಕೆ ಹಾಜರಾಗದೇ ಇರುವುದಕ್ಕೆ ಅವರು ಅನಾರೋಗ್ಯದ ಕಾರಣ ನೀಡಿದ್ದರು. ಆದರೆ, ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಅವರು ಬಾಸ್ಕೆಟ್ ಬಾಲ್ ಆಡುವುದು ಹಾಗೂ ವಿವಾಹ ಸಮಾರಂಭದಲ್ಲಿ ನೃತ್ಯ ಮಾಡುವುದನ್ನು ಗುರುತಿಸಲಾಗಿತ್ತು. ಪ್ರಕರಣದ ವಿಚಾರಣೆಗೆ ಹಾಜರಾಗುವುದರಿಂದ ಖಾಯಂ ವಿನಾಯತಿ ನೀಡುವಂತೆ ಕೋರಿ ಠಾಕೂರ್ ಸಲ್ಲಿಸಿದ್ದ ಮನವಿಯನ್ನು ಎನ್‌ಐಎ ನ್ಯಾಯಾಲಯ 2019 ಜೂನ್‌ನಲ್ಲಿ ತಿರಸ್ಕರಿಸಿತ್ತು.

2008 ಸೆಪ್ಟಂಬರ್ 29ರಂದು ಉತ್ತರ ಮಹಾರಾಷ್ಟ್ರದ ಮಾಲೆಗಾಂವ್‌ನ ಮಸೀದಿಯ ಸಮೀಪ ನಿಲ್ಲಿಸಲಾಗಿದ್ದ ಮೋಟಾರು ಸೈಕಲ್‌ಗೆ ಕಟ್ಟಲಾಗಿದ್ದ ಸ್ಫೋಟಕ ಸಿಡಿದು 6 ಮಂದಿ ಸಾವನ್ನಪ್ಪಿದ್ದರು. 100 ಮಂದಿ ಗಾಯಗೊಂಡಿದ್ದರು. ಮೋಟಾರು ಸೈಕಲ್ ಠಾಕೂರ್ ಅವರ ಹೆಸರಿನಲ್ಲಿ ನೋಂದಣಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದರು. ಈ ಪ್ರಕರಣದಲ್ಲಿ ಠಾಕೂರ್ ಸೇರಿದಂತೆ 7 ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ.

ಠಾಕೂರ್ ಅಲ್ಲದೆ ಇತರ ಆರೋಪಿಗಳೆಂದರೆ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್, ಮೇಜರ್ ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ, ಅಜಯ್ ರಾಹಿರ್ಕರ್, ಸುಧಾಕರ್ ದ್ವಿವೇದಿ ಹಾಗೂ ಸುಧಾಕರ್ ಚತುರ್ವೇದಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News