ನ್ಯಾಯಾಧೀಶರ ಸಾವು ಪ್ರಕರಣ: ಕಳ್ಳ ಮತ್ತಾತನ ಸಹವರ್ತಿಯ ವಾಹನ ಢಿಕ್ಕಿ ಹೊಡೆದಿತ್ತು ಎಂದ ಸಿಬಿಐ ಚಾರ್ಜ್ ಶೀಟ್

Update: 2021-11-25 06:47 GMT
File Photo

ರಾಂಚಿ: ಈ ವರ್ಷದ ಜುಲೈ ತಿಂಗಳಲ್ಲಿ ಬೆಳಗ್ಗಿನ ವಾಕಿಂಗ್‌ಗೆ ಹೋಗಿದ್ದ ವೇಳೆ ಧನಬಾದ್ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರು ವಾಹನವೊಂದು ಢಿಕ್ಕಿ ಹೊಡೆದು ಸಾವಿಗೀಡಾದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಅವರಿಗೆ ಢಿಕ್ಕಿ ಹೊಡೆದ ಆಟೋರಿಕ್ಷಾದಲ್ಲಿದ್ದ ಇಬ್ಬರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಅಕ್ಟೋಬರ್ 20ರಂದು ಧನಬಾದ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಚಾರ್ಜ್ ಶೀಟ್‌ನಲ್ಲಿ ಆರೋಪಿಗಳಲ್ಲೊಬ್ಬಾತನಾದ ರಾಹುಲ್ ಕುಮಾರ್ ವರ್ಮ ಓರ್ವ ವೃತ್ತಿಪರ ಕಳ್ಳ ಹಾಗೂ ಸದಾ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಹಾಗೂ ಸುಲಭವಾಗಿ ತನ್ನ ಬಲೆಗೆ ಬೀಳುವವರಿಗಾಗಿ ಹುಡುಕುತ್ತಿದ್ದ ಹಾಗೂ ಆತ ಮತ್ತು ಆತನ ಸಹವರ್ತಿ ಲಖನ್ ವರ್ಮ ಯೋಜನೆಯೊಂದನ್ನು ಜಾರಿಗೊಳಿಸಲು ಅವಕಾಶಕ್ಕಾಗಿ ಎದುರು ನೋಡುತ್ತಿದ್ದರು ಎಂದು ಹೇಳಿದೆ. ಆದರೆ ಈ ಯೋಜನೆ ಹಾಗೂ ಅದರ ಹಿಂದಿನ ಉದ್ದೇಶವನ್ನು ಸಿಬಿಐ ವಿವರಿಸಿಲ್ಲ. ವಾಹನವನ್ನು ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆಸಿದ್ದರಿಂದ ತೀವ್ರ ಗಾಯಗಳುಂಟಾಗಿ ನ್ಯಾಯಾಧೀಶರ ಸಾವಿಗೆ ಕಾರಣವಾಯಿತು ಎಂದಿದೆ ಎಂದು indianexpress.com ವರದಿ ಮಾಡಿದೆ.

ಇಬ್ಬರು ಆರೋಪಿಗಳೂ ಆಟೋರಿಕ್ಷಾವನ್ನು ಕದ್ದು ಅದನ್ನು ಬಲಿಯಾಪುರ್ ಕಡೆ ಚಲಾಯಿಸಿ ಅದರ ಹಿಂದಿನ ನಂಬರ್ ಪ್ಲೇಟ್ ತೆಗೆದು ನಂತರ ಮುಂದಿನ ಭಾಗದಲ್ಲಿ ಬರೆದಿದ್ದ ನೋಂದಣಿ ಸಂಖ್ಯೆಯನ್ನು ಉಜ್ಜಿದ್ದರು ಎಂದು ಸಿಬಿಐ ಹೇಳಿದೆ.

ನ್ಯಾಯಾಧೀಶ ಆನಂದ್ ಅವರು ಜುಲೈ 28ರಂದು ಮುಂಜಾನೆ ಸುಮಾರು 5 ಗಂಟೆಗೆ ವಾಕಿಂಗ್‌ಗೆ ಹೋದಾಗ ಅವರಿಗೆ ವಾಹನ ಢಿಕ್ಕಿ ಹೊಡೆದಿತ್ತು ಹಾಗೂ ಘಟನೆ ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News