ಬಿಜೆಪಿ ಅಧ್ಯಕ್ಷ ನಡ್ಡಾ ಎದುರು ಕಪ್ಪು ಕೈಪಟ್ಟಿ ಧರಿಸಿ ಪ್ರತಿಭಟಿಸಿದ ಗೋವಾದ ದಂತವೈದ್ಯರು

Update: 2021-11-25 07:13 GMT
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ (File Photo: PTI)

ಪಣಜಿ: ಗೋವಾ ಸರಕಾರ ಇತ್ತೀಚೆಗೆ ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆಯ ಶುಲ್ಕವನ್ನು ಏರಿಕೆ ಮಾಡಿರುವುದನ್ನು ಪ್ರತಿಭಟಿಸಿ ಗೋವಾದ ದಂತವೈದ್ಯರ ತಂಡವೊಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಜತೆಗೆ ಮಾತುಕತೆಗಳ ವೇಳೆ ಕೈಗಳಿಗೆ ಕಪ್ಪು ಪಟ್ಟಿ ಕಟ್ಟಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದೆ.

ಬಿಜೆಪಿಯ ರಾಜ್ಯ ವೈದ್ಯಕೀಯ ಘಟಕ ಆಯೋಜಿಸಿದ್ದ ಸಭೆಯ ವೇಳೆ ಈ ಘಟನೆ ನಡೆದಿದೆ. ಪ್ರತಿಭಟನೆ ನಡೆಸಿದ ದಂತ ವೈದ್ಯರು ಇಂಡಿಯನ್ ಡೆಂಟಲ್ ಅಸೋಸಿಯೇಶನ್‌ಗೆ ಸಂಬಂಧಿಸಿದವರು ಎಂದು ತಿಳಿದು ಬಂದಿದೆ.

ನಡ್ಡಾ ಜತೆಗಿನ ಸಂವಾದದ ವೇಳೆ ದಂತವೈದ್ಯರ ತಂಡ ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ ಶುಲ್ಕ ಏರಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು  ಮಾತನಾಡಿದ ಐಡಿಎ ಸದಸ್ಯ ಡಾ ಅನಿಲ್ ಡಿ'ಸಿಲ್ವಾ,  ದಿಲ್ಲಿಯ ಗುತ್ತಿಗೆದಾರರೊಬ್ಬರಿಗೆ ರಾಜ್ಯದಲ್ಲಿ ಬಯೋಮೆಡಿಕಲ್ ತ್ಯಾಜ್ಯ ಸಂಗ್ರಹಣೆ ಕಾರ್ಯ ವಹಿಸಲಾಗಿದೆ ಹಾಗೂ ದಂತವೈದ್ಯರನ್ನು ಬಾರೀ ಬಯೋಮೆಡಿಕಲ್ ತ್ಯಾಜ್ಯ ಉತ್ಪಾದಿಸುವವರ  ವಿಭಾಗದಲ್ಲಿ ಅನಗತ್ಯವಾಗಿ ಸೇರಿಸಲಾಗಿದೆ ಎಂದರು.

ಆದರೆ ಈ ವೈದ್ಯರು ಬಿಜೆಪಿ ಅಧ್ಯಕ್ಷರ ಎದುರು ನಡೆಸಿರುವ ಈ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಆ ಸಂದರ್ಭ ಉಪಸ್ಥಿತರಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ವೈದ್ಯರು ತಮ್ಮನ್ನು ಈ ಹಿಂದೆ ಭೇಟಿಯಾಗಿದ್ದಾರೆ ಅವರ ಬೇಡಿಕೆಯನ್ನು ಪರಿಗಣಿಸಲಾಗುವುದು ಆದರೆ ಬಿಜೆಪಿ ಅಧ್ಯಕ್ಷರೆದುರು ಪ್ರತಿಭಟಿಸುವ ಅಗತ್ಯವಿಲ್ಲವಾಗಿತ್ತು, ಎಂದಿದ್ದಾರೆ.

"ಯಾವುದೋ ತಿಳಿದಿರದ ಕಾರಣಕ್ಕಾಗಿ ಈ ಪ್ರತಿಭಟನೆ ನಡೆದಿದೆ, ಬೇಡಿಕೆ ಪರಿಗಣಿಸುವ ಆಶ್ವಾಸನೆ ನೀಡಲಾಗಿದ್ದರೂ ಪ್ರತಿಭಟನೆ ನಡೆಸಲಾಗಿದೆ,'' ಎಂದು ಸಿಎಂ ಕಚೇರಿಯಿಂದ ಬಿಡುಗಡೆಯಾದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News