ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್

Update: 2021-11-26 05:53 GMT
Photo:Twitter/@BCCI

ಕಾನ್ಪುರ:  ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ತನ್ನ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.

ನ್ಯೂಝಿಲ್ಯಾಂಡ್ ವಿರುದ್ಧ ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನ ಎರಡನೇ ದಿನವಾದ ಶುಕ್ರವಾರ  ಈ ಸಾಧನೆ ಮಾಡಿದರು.

ಔಟಾಗದೆ 75 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ಶ್ರೇಯಸ್ 157 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು.

ಶ್ರೇಯಸ್ ಅವರು ಕಾನ್ಪುರದಲ್ಲಿ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ 2ನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. 1969ರಲ್ಲಿ ಆಸ್ಟ್ರೇಲಿಯದ ವಿರುದ್ಧ ಕರ್ನಾಟಕದ ಬ್ಯಾಟ್ಸ್ ಮನ್ ಗುಂಡಪ್ಪ ವಿಶ್ವನಾಥ್ ಈ ಸಾಧನೆ ಮಾಡಿದ್ದರು.

ಭಾರತವು ಮೊದಲ ಇನಿಂಗ್ಸ್ ನಲ್ಲಿ 95 ಓವರ್ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದೆ. ಅಯ್ಯರ್ ಗೆ ಆರ್.ಅಶ್ವಿನ್ ಸಾಥ್ ನೀಡುತ್ತಿದ್ದಾರೆ.

ಅಯ್ಯರ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ 16ನೇ ಭಾರತೀಯ ಎನಿಸಿಕೊಂಡರು. 2018 ರ ಅಕ್ಟೋಬರ್‌ನಲ್ಲಿ ರಾಜ್‌ಕೋಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪೃಥ್ವಿ ಶಾ ಇದೇ ರೀತಿಯ ಸಾಧನೆ ಮಾಡಿದ್ದರು. 1933 ರಲ್ಲಿ ಲಾಲಾ ಅಮರನಾಥ್ ಅವರು ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಮೊದಲ ಭಾರತೀಯರಾಗಿದ್ದರು. ಚೊಚ್ಚಲ ಪಂದ್ಯದಲ್ಲಿ ಟೆಸ್ಟ್ ಶತಕ ಸಿಡಿಸಿದ  ಆಟಗಾರರೆಂದರೆ: ಆರ್.ಎಚ್. ಶೋಧನ್, ಕೃಪಾಲ್ ಸಿಂಗ್, ಅಬ್ಬಾಸ್ ಅಲಿ ಬೇಗ್, ಹನುಮಂತ್ ಸಿಂಗ್, ಗುಂಡಪ್ಪ ವಿಶ್ವನಾಥ್, ಸುರೀಂದರ್ ಅಮರನಾಥ್, ಮುಹಮ್ಮದ್ ಅಝರುದ್ದೀನ್, ಪ್ರವೀಣ್ ಆಮ್ರೆ, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ, ಶಿಖರ್ ಧವನ್, ರೋಹಿತ್ ಶರ್ಮಾ ಹಾಗೂ ಪೃಥ್ವಿ ಶಾ.

ಕೃಪಾಲ್ ಸಿಂಗ್ ಹಾಗೂ  ಸುರೀಂದರ್ ಅಮರನಾಥ್ ನಂತರ ನ್ಯೂಝಿಲ್ಯಾಂಡ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ ಮೂರನೇ ಭಾರತೀಯ ಆಟಗಾರ ಅಯ್ಯರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News