ಉತ್ತರ ಪ್ರದೇಶ: ಒಂದೇ ಕುಟುಂಬದ ನಾಲ್ವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆ; ಬಾಲಕಿಯ ಮೇಲೆ ಅತ್ಯಾಚಾರ ಶಂಕೆ

Update: 2021-11-26 16:19 GMT

ಹೊಸದಿಲ್ಲಿ,ನ.26: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಪರಿಶಿಷ್ಟ ಜಾತಿಯ ಕುಟುಂಬವೊಂದರ ನಾಲ್ವರನ್ನು ಹತ್ಯೆ ಮಾಡಲಾಗಿದ್ದು,ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ನೆರೆಯ ಮೇಲ್ಜಾತಿಯ ಕುಟುಂಬವು ಈ ಘೋರ ಕೃತ್ಯವನ್ನೆಸಗಿದೆ ಎಂದು ಎಂದು ಬಲಿಪಶು ಕುಟುಂಬದ ಸಂಬಂಧಿಕರು ಆರೋಪಿಸಿದ್ದಾರೆ.

 50ರ ಹರೆಯದ ವ್ಯಕ್ತಿ,45ರ ಹರೆಯದ ಆತನ ಪತ್ನಿ ಮತ್ತು 10ರ ಹರೆಯದ ಪುತ್ರನ ಮೃತದೇಹಗಳು

ಮನೆಯ ಅಂಗಳದಲ್ಲಿ ಪತ್ತೆಯಾಗಿದ್ದರೆ,17ರ ಹರೆಯದ ಬಾಲಕಿಯ ಮೃತದೇಹ ಮನೆಯ ಕೋಣೆಯಲ್ಲಿ ಬಿದ್ದುಕೊಂಡಿತ್ತು ಎಂದು ವರದಿಗಳು ತಿಳಿಸಿವೆ.ಗೋಹ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಕುಟುಂಬದ ಯಜಮಾನ ವೃತ್ತಿಯಲ್ಲಿ ಕಾರ್ಮಿಕನಾಗಿದ್ದ. ಕುಟುಂಬದ ಸದಸ್ಯರ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಲಾಗಿದ್ದು,ಎಲ್ಲರ ಶರೀರಗಳಲ್ಲಿ ತೀವ್ರ ಗಾಯಗಳಿವೆ ಎಂದು ಪೊಲೀಸರು ತಿಳಿಸಿರುವುದನ್ನು ವರದಿಗಳು ಉಲ್ಲೇಖಿಸಿವೆ.

ದಲಿತ ಕುಟುಂಬ ಮತ್ತು ನೆರೆಯ ಮೇಲ್ಜಾತಿಯ ಕುಟುಂಬದ ನಡುವೆ 2019ರಿಂದಲೂ ಜಮೀನು ವಿವಾದವಿತ್ತು ಮತ್ತು ರಾಜಿ ಮಾಡಿಕೊಳ್ಳುವಂತೆ ಪೊಲೀಸರು ದಲಿತ ಕುಟುಂಬವನ್ನು ಬಲವಂತಗೊಳಿಸುತ್ತಿದ್ದರು ಎಂದು ಸಂಬಂಧಿಕರು ಸುದ್ದಿಗಾರರಿಗೆ ತಿಳಿಸಿದರು.

ಮೃತ ಕುಟುಂಬವು ಗ್ರಾಮದ ಇತರ ಕೆಲವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿತ್ತು. ಹಿಂದಿನ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಮೃತ ಕುಟುಂಬವು ಆರೋಪಿಸಿತ್ತು ಎಂದು ಡಿಐಜಿ ಸರ್ವಶ್ರೇಷ್ಠ ತ್ರಿಪಾಠಿ ತಿಳಿಸಿದರು.

ಪೊಲೀಸರು 11 ಹೆಸರಿಸಲಾಗಿರುವ ವ್ಯಕ್ತಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಆರೋಪಗಳೊಂದಿಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News