ದಿಲ್ಲಿ ಪೊಲೀಸ್ ಆಯುಕ್ತರಾಗಿ ರಾಕೇಶ್ ಅಸ್ತಾನ ನೇಮಕ ಪ್ರಶ್ನಿಸಿ ಅಪೀಲು: ಅಸ್ತಾನ, ಕೇಂದ್ರಕ್ಕೆ ಸುಪ್ರೀಂ ನೋಟಿಸ್
ಹೊಸದಿಲ್ಲಿ: ಐಪಿಎಸ್ ಅಧಿಕಾರಿ ರಾಕೇಶ್ ಅಸ್ತಾನ ಅವರನ್ನು ದಿಲ್ಲಿ ಪೊಲೀಸ್ ಆಯುಕ್ತರಾಗಿ ನೇಮಕಗೊಳಿಸುವ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ದಿಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ ಎಂಬ ಹೆಸರಿನ ಎನ್‍ಜಿಒ ಸಲ್ಲಿಸಿದ್ದ ಅಪೀಲಿನ ಮೇಲೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಇಂದು ಒಪ್ಪಿದೆ.
ಜಸ್ಟಿಸ್ ಡಿ ವೈ ಚಂದ್ರಚೂಡ್ ಹಾಗೂ ಜಸ್ಟಿಸ್ ಎ ಎಸ್ ಬೋಪಣ್ಣ ಅವರ ಪೀಠ ಈ ಕುರಿತಂತೆ ಕೇಂದ್ರ ಸರಕಾರ ಮತ್ತು ಅಸ್ತಾನ ಅವರಿಗೆ ನೋಟಿಸ್ ಜಾರಿಗೊಳಿಸಿ ಅವರ ಪ್ರತಿಕ್ರಿಯೆಯನ್ನು ಕೇಳಿದೆ.
ಅಸ್ತಾನ ಅವರ ನಿವೃತ್ತಿಗೆ ನಾಲ್ಕು ದಿನಗಳಿರುವಾಗ ಜುಲೈ 31ರಂದು ಅವರನ್ನು ದಿಲ್ಲಿ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿದ ಕ್ರಮವನ್ನು ಎನ್‍ಜಿಒ ತನ್ನ ಅಪೀಲಿನಲ್ಲಿ ಪ್ರಶ್ನಿಸಿದೆಯಲ್ಲದೆ ಈ ಕುರಿತಂತೆ ರಿಟ್ ಒಂದನ್ನೂ ಸಲ್ಲಿಸಿದೆ.
ಅಪೀಲುದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದಿಸುತ್ತಿದ್ದಾರೆ. ಸುಪ್ರೀಂ ಸೂಚನೆಯಂತೆ ಎರಡು ವಾರಗಳೊಳಗಾಗಿ ಪ್ರತಿಕ್ರಿಯೆ ಸಲ್ಲಿಸುವುದಾಗಿ ಆಸ್ಥಾನ ಪರ ವಕೀಲ ಮುಕುಲ್ ರೋಹಟ್ಗಿ ಹಾಗೂ ಕೇಂದ್ರ ಪರ ವಕೀಲರಾಗಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.
ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ ಆರಂಭದಲ್ಲಿ ರಿಟ್ ಸಲ್ಲಿಸಿದ್ದರೆ ನವೆಂಬರ್ 18ರಂದು ಸುಪ್ರೀಂ ಕೋರ್ಟ್ ನೀಡಿದ ಸೂಚನೆಯಂತೆ ಅಪೀಲು ಸಲ್ಲಿಸಿತ್ತು.