ಡಿ.15ರಿಂದ ನಿಗದಿತ ಅಂತರ್ ರಾಷ್ಟ್ರೀಯ ವಿಮಾನ ಯಾನ ಪುನರಾರಂಭಿಸಲು ಕೇಂದ್ರ ಸರಕಾರ ಚಿಂತನೆ
ಹೊಸದಿಲ್ಲಿ: ಭಾರತವು ಡಿಸೆಂಬರ್ 15 ರಿಂದ ನಿಗದಿತ ಅಂತರ್ ರಾಷ್ಟ್ರೀಯ ವಿಮಾನಯಾನವನ್ನು ಪುನರಾರಂಭಿಸಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಆದೇಶವನ್ನು ಉಲ್ಲೇಖಿಸಿ ಎಂದು ಶುಕ್ರವಾರ ಸಂಜೆ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
"ಭಾರತಕ್ಕೆ ಹಾಗೂ ಭಾರತದಿಂದ ನಿಗದಿತ ವಾಣಿಜ್ಯ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನ ಸೇವೆಗಳ ಪುನರಾರಂಭವನ್ನು ಗೃಹ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು ಮತ್ತು ಆರೋಗ್ಯ ಸಚಿವಾಲಯದೊಂದಿಗೆ ಸಮಾಲೋಚಿಸಿ ಪರಿಶೀಲಿಸಲಾಗಿದೆ ಹಾಗೂ ನಿರ್ಧರಿಸಲಾಗಿದೆ... ಡಿಸೆಂಬರ್ 15 ರಿಂದ ವಿಮಾನಯಾನ ಪುನರಾರಂಭಿಸಬಹುದು" ಎಂದು ವಾಯುಯಾನ ಸಚಿವಾಲಯದ ಆದೇಶವನ್ನು ಪಿಟಿಐ ಉಲ್ಲೇಖಿಸಿದೆ.
ವಾಪಸಾತಿ ಸೇವೆಗಳು ಹಾಗೂ ಅಗತ್ಯ ಸರಕುಗಳನ್ನು ಸಾಗಿಸುವ ವಿಮಾನಗಳನ್ನು ಹೊರತುಪಡಿಸಿ ನಿಗದಿತ ಅಂತರಾಷ್ಟ್ರೀಯ ವಿಮಾನಗಳನ್ನು ಕೋವಿಡ್ ಲಾಕ್‌ಡೌನ್ ನಂತರ ಕಳೆದ ವರ್ಷ ಮಾರ್ಚ್‌ನಲ್ಲಿ ಸ್ಥಗಿತಗೊಳಿಸಲಾಗಿತ್ತು.
ಪ್ರಕರಣಗಳ ಸಂಖ್ಯೆ ಕಡಿಮೆಯಾದಂತೆ ಹಾಗೂ ವ್ಯಾಕ್ಸಿನೇಷನ್ ಕವರೇಜ್ ಹೆಚ್ಚಾದಂತೆ, ಇತರ ದೇಶಗಳೊಂದಿಗೆ 'ಏರ್ ಬಬಲ್' ವ್ಯವಸ್ಥೆಗಳೊಂದಿಗೆ ನಿರ್ಬಂಧಗಳನ್ನು ಕ್ರಮೇಣ ಸರಾಗಗೊಳಿಸಲಾಯಿತು.